ಜಿಲ್ಲೆ

ವಕೀಲಿಕೆ ವೃತ್ತಿಯಲ್ಲಿ ನೈತಿಕತೆ ಮರೆಯದಿರಿ:ನ್ಯಾ. ಬಿ.ಕೆ ರವಿಕಾಂತ್ ಸಲಹೆ

ಹಾಸನ: ವಕೀಲಿಕೆ ವೃತ್ತಿಯಲ್ಲಿ ಕಠಿಣ ಅಧ್ಯಯನಕ್ಕೆ ಪರ್ಯಾಯ ಮಾರ್ಗ ಇಲ್ಲ. ನೈತಿಕತೆಗೆ ವಿರುದ್ಧವಾಗದ ರೀತಿಯಲ್ಲಿ ವಿದ್ಯಾರ್ಥಿಗಳು ಸಮಾಜದೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ ರವಿಕಾಂತ್ ಹೇಳಿದರು.
ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ವ್ಯಕ್ತಿತ್ವ ವಿಕಸನದ ಕಾರ್ಯಾಗಾರದಲ್ಲಿ ಕಾನೂನು ಶಿಕ್ಷಣದಲ್ಲಿ ಕೌಶಲಗಳ ಅಭಿವೃದ್ಧಿ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ನೈತಿಕತೆಯು ಯಾವಾಗಲೂ ವೃತ್ತಿಯೊಂದಿಗೆ ಇರಬೇಕು. ಸಮಾಜ ನಿರ್ಮಾಣದಲ್ಲಿ ಕಾನೂನು ವಿದ್ಯಾರ್ಥಿಗಳ ಕೊಡುಗೆ ಅಪಾರವಾದದ್ದು. ಕಾನೂನು ವಿದ್ಯಾರ್ಥಿಗಳು ಮತ್ತು ವಕೀಲರು ನೈತಿಕತೆಯಿಂದ ದೂರ ಹೋಗಬಾರದು. ಮಾನವನು ಬದುಕಿನಲ್ಲಿ ಯಶಸ್ಸು ಗಳಿಸಬೇಕಾದರೆ ಉತ್ತಮ ಗುರಿ, ಪರಿಶ್ರಮ, ಶ್ರಧ್ಧೆ ಅತೀ ಮುಖ್ಯ. ಸಮಾಜ ಸೇವೆಯ ಮೂಲಕ ಸಂಬಂಧಗಳು ಬಲಗೊಳ್ಳುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ವನಿತಾ ಮಾತನಾಡಿ, ಸಮಾಜದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು. ಪ್ರಸ್ತುತ ದಿನಗಳಲ್ಲಿ ಆಂಗ್ಲಭಾಷೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಸ್ಪರ್ಧಾತ್ಮಕ ಜಗತ್ತಿಗೆ ಭಾಗವಹಿಸಲು ಆಂಗ್ಲ ಭಾಷೆಯನ್ನು ಪ್ರತಿಯೊಬ್ಬರೂ ಕಲಿಯಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಶೀನಾ ಥಾಮಸ್ ಅಧ್ಯಕ್ಷೀಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ.ಗಣೇಶ್ ಹೆಗಡೆ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಲೇಪಾಕ್ಷಯ್ಯ, ಎಸ್.ವಿ. ಡಾ. ಅನಿತಾ, ಗ್ರಂಥಪಾಲಕರಾದ ವಿ. ಪಾಪಣ್ಣ, ದೈಹಿಕ ಶಿಕ್ಷಣ ನಿರ್ದೇಶಕರಾದ ಎಸ್.ಎನ್.ಮಹದೇವಪ್ಪ, ಉಪನ್ಯಾಸಕರಾದ ಡಾ. ಭಾರತಿ ಜಿ ಗಣವಾರಿ, ಶಿವಣ್ಣ ನಾಯ್ಕ ಉಪಸ್ಥಿತರಿದ್ದರು.