ಮೈಸೂರು: ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಮೈಸೂರು ವಕೀಲರ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಕೋರ್ಟ್‌ನ ಕಾರ್ಯಕಲಾಪಗಳಿಂದ ಹೊರಗುಳಿದ ವಕೀಲರು, ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಜಮಾವಣೆಗೊಂಡು ತಮ್ಮ ಹಕ್ಕಿಗಾಗಿ ಆಗ್ರಹಿಸಿದರು.
ಕರ್ನಾಟಕ ವಕೀಲರ ಪರಿಷತ್ತು ವತಿಯಿಂದ ರಾಜ್ಯ ಸರ್ಕಾರಕ್ಕೆ ಒಂದು ವರ್ಷದ ಹಿಂದೆ ವಕೀಲರ ಸಂರಕ್ಷಣಾ ಕಾಯ್ದೆಯ ಕರಡು ಪ್ರತಿಯನ್ನು ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕರಡು ಪ್ರತಿಯನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಿ ಉಭಯ ಸದನಗಳ ಒಪ್ಪಿಗೆ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಕಮಲಾಬಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಮಹಾದೇವಸ್ವಾಮಿ, ಪದಾಧಿಕಾರಿಗಳಾದ ಪುಟ್ಟಸಿದ್ದೇಗೌಡ, ಉಮೇಶ್, ಭಾಗ್ಯಮ್ಮ, ಎಚ್.ಎಸ್. ಮಹದೇವಸ್ವಾಮಿ ಇನ್ನಿತರರು ಇದ್ದರು.