ಬೆಳಗಾವಿ: ವಕೀಲ ಸಮುದಾಯದ ಘನತೆಗೆ ಧಕ್ಕೆ ಬರುವಂತೆ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿರುವ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬೆಳಗಾವಿ ಬಾರ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಪ್ರತಿಭಟಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಾಸಕರ ವಿರುದ್ಧ ಪ್ರತಿಭಟಿಸಿದ ವಕೀಲರು, ಶಾಸಕರ ಸದಸ್ಯತ್ವ ರದ್ದುಗೊಳಿಸುವಂತೆ ಡಿಸಿ ಮೂಲಕ ವಿಧಾನ ಸಭೆ ಸಭಾಪತಿಗೆ ಮನವಿ ರವಾನಿಸಿದರು. ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದ ಬಳಿ ಸಾಲಾಪುರ ಏತ ನೀರಾವರಿ ಕಾಲುವೆಯ ಭೂಮಿ ಪೂಜೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ಮಾತನಾಡುವಾಗ ವಕೀಲ ಸಮುದಾಯದ ಘನತೆಗೆ ಕಳಂಕ ತರುವ ರೀತಿಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಮಾತನಾಡಿದ್ದು, ವಕೀಲರಿಗೆ ಮಾಡಿದ ಅಪಮಾನವಾಗಿದೆ. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಭು ಯತ್ನಟ್ಟಿ ಅವರು, ಮಹಾದೇವಪ್ಪ ಯಾದವಾಡ ಅವರು ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿದ್ದಾರೆ. ವಕೀಲರ ವಿರುದ್ಧ ನೀಡಿರುವ ಹೇಳಿಕೆ ಸಮಂಜಸವಲ್ಲ. ಕೂಡಲೇ ಅವರ ಶಾಸಕ ಸದಸ್ಯತ್ವ ರದ್ದುಗೊಳಿಸಬೇಕೆಂದು ಎಂದು ಆಗ್ರಹಿಸಿದರು. ವಕೀಲಕರ ಸಂಘ ಉಪಾಧ್ಯಕ್ಷ ಸಚಿನ್ ಶಿವಣ್ಣವರ ಹಾಗೂ ಸುಧೀರ ಚವ್ಹಾಣ, ಕಾರ್ಯದರ್ಶಿ ಗಿರಿರಾಜ ಪಾಟೀಲ, ಎಂ.ಟಿ.ಪಾಟೀಲ, ಅಭಿಷೇಕ ಉದೋಶಿ ಇತರರು ಇದ್ದರು.