ಜಿಲ್ಲೆ

ವಕೀಲರ ರಕ್ಷಣೆಗೆ ಸೂಕ್ತ ಕಾನೂನು ಜಾರಿಗೆ ತನ್ನಿ


ಶ್ರೀರಂಗಪಟ್ಟಣ: ನ್ಯಾಯ ಕೊಡಿಸುವ ವಿಚಾರಕ್ಕೆ ಸಂವಿಧಾನಿಕವಾಗಿ ಹೋರಾಟ ನಡೆಸುವ ನ್ಯಾಯವಾದಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಶ್ರೀರಂಗಪಟ್ಟಣ ತಾಲೂಕು ವಕೀಲರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಯಿತು.

ಪಟ್ಟಣದ ನ್ಯಾಯಾಲಯ ಸಂಕೀರ್ಣದಿಂದ ಮೆರವಣಿಗೆ ಆರಂಭಿಸಿದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ತಾಲೂಕು ಕಚೇರಿ ತಲುಪಿ ಕೆಲ ನಿಮಿಷ ಅಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಬಳಿಕ ಉಪ ತಹಸೀಲ್ದಾರ್ ರೇಖಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಸತ್ಯನಾರಾಯಣ್ ಮಾತನಾಡಿ, ಮೈಸೂರು, ಹಾಸನ ಸೇರಿದಂತೆ ವಿವಿಧೆಡೆ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸಂಘದ ಸದಸ್ಯರ ಮೇಲಿನ ಹಲ್ಲೆ ಮಾಡಿರುವ ಪ್ರಕರಣಗಳು ವರದಿಯಾಗಿದೆ. ನ್ಯಾಯಿಕ ಉದ್ದೇಶಗಳಿಗಾಗಿ ಶ್ರಮಿಸುವ ನ್ಯಾಯಾವಾದಿಗಳಿಗೆ ಸಂವಿಧಾನ ವ್ಯವಸ್ಥೆಯಲ್ಲಿ ಸೂಕ್ತ ರಕ್ಷಣೆ ಸಿಗದಿರುವುದು ವಿಪರ್ಯಾಸದ ಸಂಗತಿ. ಹೀಗಾಗಿ, ರಾಜ್ಯ ಸರ್ಕಾರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ವಕೀಲರ ರಕ್ಷಣೆಗೆ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಮುಂದಾಗಬೇಕು. ಈ ವಿಚಾರವಾಗಿ ಕಾನೂನು ಸಚಿವ ಮಾಧುಸ್ವಾಮಿ ಅವರು ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪತಹಸೀಲ್ದಾರ್ ರೇಖಾ, ಸರ್ಕಾರಕ್ಕೆ ವಕೀಲರ ಮನವಿ ಪತ್ರ ರವಾನಿಸುವುದಾಗಿ ಭರವಸೆ ನೀಡಿದರು. ವಕೀಲರ ಸಂಘದ ತಾಲೂಕು ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಡಿ.ಚಂದ್ರೇಗೌಡ, ಖಜಾಂಚಿ ಕೆ.ಎಂ.ವಿನಯ್, ಮಾಜಿ ಅಧ್ಯಕ್ಷ ಎ.ಕುಮಾರ್, ಕೆ.ಕುಮಾರ್, ನಾರಾಯಣಸ್ವಾಮಿ, ಜಯಸ್ವಾಮಿ, ಸಿ.ರಾಜಶೇಖರ್, ಶಿವರಾಜು, ಸಿದ್ದೇಶ್, ಬಾಲರಾಜು ಇತರರು ಉಪಸ್ಥಿತರಿದ್ದರು.