ಜಿಲ್ಲೆ

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ

ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.


ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ಮಾತನಾಡಿ, ವಕೀಲರಿಗೆ ವೃತ್ತಿ ಗೌರವದ ಜತೆಗೆ ರಕ್ಷಣೆಯ ಅಗತ್ಯ ಇದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತರಬೇಕು. ಈಗಾಗಲೇ ಸರ್ಕಾರಕ್ಕೆ ವಕೀಲರ ರಕ್ಷಣಾ ಕಾಯ್ದೆಯ ಬಗ್ಗೆ ವಿವರವಾದ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ವಕೀಲರ ರಕ್ಷಣೆ ಕಾಯ್ದೆ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕೂಡಲೇ ಜಾರಿಗೆ ತರಬೇಕು. ಆ ಮೂಲಕ ವಕೀಲರ ಕರ್ತವ್ಯಕ್ಕೆ ಮತ್ತು ಬದುಕಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.


ಪ್ರತಿಭಟನೆಗೂ ಮುನ್ನ ಪಟ್ಟಣದ ನ್ಯಾಯಾಲಯದ ಆವರಣದಿಂದ ಸತ್ಯಾಗ್ರಹದವರೆಗೆ ಬೈಕ್ ಜಾಥಾ ನಡೆಸಿದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.


ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ.ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ಜಂಟಿ ಕಾರ್ಯದರ್ಶಿ ಬಿ.ಸುವರ್ಣಾ ಖಜಾಂಚಿ ಎನ್.ಎಸ್.ಪ್ರಸನ್ನ, ಕ್ರೀಡಾ ಕಾರ್ಯದರ್ಶಿ ಟಿ.ಜೆ.ಸುನೀಲ್‌ಕುಮಾರ್, ಗ್ರಂಥಪಾಲಕಿ ಸಿ.ಆರ್.ಚೈತ್ರಾ, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಎಂ.ಯದುನಂದನ, ಪಿ.ಸಿದ್ದಪ್ಪಾಜಿ, ವಕೀಲರಾದ ಕೋಮಲಾ, ಲೋಕೇಶ್, ಮಧುಸೂದನ್, ಮಹೇಶ್, ಅಶೋಕ, ಪುಟ್ಟಸ್ವಾಮಿ, ನಾಗರಾಜು, ನಂದಿನಿ, ನಾಗರತ್ನಾ ಇದ್ದರು.