ವಕೀಲರ ವೃತ್ತಿಗೆ ಸಾಕಷ್ಟು ತಾಳ್ಮೆ ಮತ್ತು ಪರಿಶ್ರಮ ಅಗತ್ಯವಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಭಿಪ್ರಾಯಪಟ್ಟರು.
ಚೆನ್ನೈನ ಸುರಾನ ಮತ್ತು ಸುರಾನ ಅಂತಾರಾಷ್ಟ್ರೀಯ ಕಾನೂನು ಸಂಸ್ಥೆ (ಎಸ್‌ಎಸ್‌ಐಎ) ವತಿಯಿಂದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಆಯೋಜಿಸಿರುವ 2 ದಿನಗಳ 20ನೇ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿ, ವಕೀಲರ ವೃತ್ತಿ ಹೂವಿನ ಹಾಸಿಗೆ ಅಲ್ಲ, ಅದು ಮುಳ್ಳಿನ ದಾರಿ. ಇದು ತಾಳ್ಮೆ ಮತ್ತು ಪರಿಶ್ರಮವನ್ನು ಬಯಸುತ್ತದೆ ಎಂದರು.
ವಕೀಲರು ಪ್ರಾಮಾಣಿಕತೆ, ಧೈರ್ಯ, ಶ್ರಮಶೀಲರಾಗಿರಬೇಕು. ಜತೆಗೆ, ಬುದ್ಧಿವಂತಿಕೆ, ವಾಕ್ಚಾತುರ್ಯ, ತೀರ್ಪುಗಳ ಅಧ್ಯಯನ ಮತ್ತು ಸಹಭಾಗಿತ್ವವನ್ನು ಹೊಂದಿರಬೇಕು. ವಕೀಲರು ಸನ್ಯಾಸಿಯಂತೆ ಬದುಕಬೇಕು. ಕುದುರೆಯಂತೆ ಕೆಲಸ ಮಾಡಬೇಕು. ಆದರೆ, ಸನ್ಯಾಸಿಯಂತೆ ಬದುಕುವುದನ್ನು ಮರೆತು ಹಣದ ಹಿಂದೆ ಬಿದ್ದಿದ್ದು, ಜನರಿಗೆ ಸೇವೆ ನೀಡುವಲ್ಲಿ ವಿಫಲರಾಗಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವ ವಕೀಲರು ದೇಶದ ಚರಿತ್ರೆಯನ್ನು ಅರಿತುಕೊಳ್ಳಬೇಕು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಸಾಕಷ್ಟು ವಕೀಲರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯದ ನಂತರ ವಕೀಲರು ತಮ್ಮ ವೃತ್ತಿಯನ್ನು ತೊರೆದು ಸಂವಿಧಾನ ರಚನೆಯಲ್ಲಿ ತಮ್ಮ ಸಮಯ ಮತ್ತು ಜೀವನವನ್ನೇ ಕಳೆದರು. ಡಾ.ರಾಜೇಂದ್ರಪ್ರಸಾದ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆ ಮಾಡಲು ಸಮಿತಿಯಲ್ಲಿ 398 ಸದಸ್ಯರಿದ್ದರು ಎಂದು ನೆನೆದರು.
ಸ್ವಾತಂತ್ರೃ ಹೋರಾಟದಲ್ಲಿ ಭಾಗಿಯಾದವರು ಬಹುಪಾಲು ವಕೀಲರು. ಮಹಾತ್ಮ ಗಾಂಧಿ, ನೆಹರು, ಬಾಲಗಂಗಾಧರ ತಿಲಕ್, ಪಂಡಿತ್ ಮದನ್‌ಮೋಹನ್ ಮಾಳವೀಯ, ಸಿ.ರಾಜಗೋಪಾಲಾಚಾರಿ ಮುಂತಾದವರು ದೇಶಕ್ಕಾಗಿ ಸೇವೆ ಸಲ್ಲಿಸಿದ ವಕೀಲರು. ಇವರ ಸೇವೆಯ ಕಾರಣದಿಂದಾಗಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಲು ಮತ್ತು ಅತ್ಯುತ್ತಮ ಸಂವಿಧಾನವನ್ನು ರಚಿಸಲು ಸಾಧ್ಯವಾಗಿದೆ ಎಂದರು.
ಎಸ್‌ಎಸ್‌ಐಎನ ಮುಖ್ಯ ಆಡಳಿತಾಧಿಕಾರಿ ಪ್ರೀತಮ್ ಸುರಾನ, ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಕೆ.ಎಸ್.ಸುರೇಶ್, ಪ್ರಾಂಶುಪಾಲ ಡಾ.ಎಸ್.ನಟರಾಜು ಪಾಲ್ಗೊಂಡಿದ್ದರು.
ವಕೀಲರು ಬಡವರಿಗೆ ಕಡಿಮೆ ವೆಚ್ಚದಲ್ಲಿ ನ್ಯಾಯದಾನ ಕಲ್ಪಿಸಿಕೊಡಬೇಕೆಂಬುದು ಮಹಾತ್ಮಗಾಂಧಿ ಅವರ ಆಶಯವಾಗಿತ್ತು. ಈ ರೀತಿ ಸೇವೆಯನ್ನು ಬಡವರಿಗೆ ನೀಡಲಾಗುತ್ತಿದೆಯೇ ಎಂಬುದ ಕುರಿತು ವಕೀಲರು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಎಚ್.ಪಿ.ಸಂದೇಶ್ ಹೈಕೋರ್ಟ್ ನ್ಯಾಯಮೂರ್ತಿ
30 ಕಾಲೇಜುಗಳು ಭಾಗಿ:
ಸ್ಪರ್ಧೆಯಲ್ಲಿ ಸುಮಾರು 30 ಪ್ರತಿಷ್ಠಿತ ಕಾನೂನು ಕಾಲೇಜುಗಳು ಭಾಗವಹಿಸಿವೆ. ಕಂಪನಿ ವ್ಯವಹಾರ, ಅಂತಾರಾಷ್ಟ್ರೀಯ ತೆರಿಗೆ ವಿಷಯದಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ರಾಜ್ಯದ ಪರಿಣಿತ ಲೆಕ್ಕಪರಿಶೋಧಕರು, ನ್ಯಾಯಾಧೀಶರು, ಕಂಪನಿ ಸೆಕ್ರೆಟರಿಗಳು, ವಕೀಲರು ಸ್ಪರ್ಧೆಯಲ್ಲಿ ನ್ಯಾಯಾಧೀಶರಾಗಿ ಭಾಗವಹಿಸಲಿದ್ದಾರೆ. ಏ.9ರಂದು ಅಂತಿಮ ಸ್ಪರ್ಧೆ ನಡೆಯಲಿದೆ.