ಚಾಮರಾಜನಗರ: ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ರಾಕೇಶ್ ಕಿಶೋರ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ಜಮಾಯಿಸಿದ ವಕೀಲರು ಅಲ್ಲಿಂದ ಮೆರವಣಿಗೆ ಹೊರಟು, ನ್ಯಾಯಾಲಯದ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದ ಮುಖ್ಯದ್ವಾರದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ತೆರಳಿ ವಕೀಲ ರಾಕೇಶ್ ಕಿಶೋರ್ ವಿರುದ್ಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ನಂಜಯ್ಯ ಮಾತನಾಡಿ, ದೇಶದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದಿರುವುದು ಅತ್ಯಂತ ಖಂಡನೀಯ. ಆತ ಮಾಡಿರುವು ಕೃತ್ಯ ವಕೀಲ ಸಮುದಾಯಕ್ಕೆ ಕಳಂಕ ತರುವಂತಹ ಕೆಲಸವನ್ನು ಮಾಡಿದ್ದಾರೆ. ಈ ಕೂಡಲೇ ಅವರು ವಿರುದ್ಧ ನಿರ್ದಾಕ್ಷಣ್ಯ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ಸಿ.ಸಿ.ರಮೇಶ್, ನಾಗಯ್ಯ, ಜಯಪ್ರಕಾಶ್, ಪ್ರಸನ್ನ ಕುಮಾರ್, ನಾಗಮ್ಮ, ಜಾವೀದ್, ನಾಗರಾಜು, ದಲಿತ್ ರಾಜ್, ಯಲಕ್ಕೂರು ಮಲ್ಲಿಕ್, ಪೃಥ್ವಿರಾಜ್, ಮಹೇಂದ್ರ ಹಾಗೂ ಇತರರು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ನಡೆಸಿರುವ ದಾಳಿ ಸಂವಿಧಾನದ ಮೇಲೆ ನಡೆಸಿರುವ ದಾಳಿಯಾಗಿದೆ. ಅದರಲ್ಲೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ವಕೀಲರೆ ಇಂತಹ ಕೃತ್ಯ ಎಸಗಿರುವುದು ಅತ್ಯಂತ ಖಂಡನೀಯ. ಈ ಕೂಡಲೇ ವಕೀಲ ರಾಕೇಶ್ ಕಿಶೋರ್ ಅವರನ್ನು ಗಡಿಪಾರ ಮಾಡಬೇಕು. ಪುಟ್ಟಸ್ವಾಮಿ ರಾಮಸಮುದ್ರ, ಮಾಜಿ ಅಧ್ಯಕ್ಷ, ಜಿಲ್ಲಾ ವಕೀಲರ ಸಂಘ, ಚಾಮರಾಜನಗರ