ರಾಯಚೂರು: ರಾಯಚೂರು ಮಾರ್ಗವಾಗಿ ಕಲಬುರಗಿಯಿಂದ ಯಶವಂತಪುರದವರೆಗೆ ವಂದೇ ಭಾರತ್ ಹೈಸ್ಪೀಡ್ ರೈಲು ಸಂಚಾರ ಆರಂಭಿಸುವಂತೆ ಗುಂತಕಲ್ ರೈಲು ವಿಭಾಗದ ಸಲಹಾ ಸಮಿತಿ ಸದಸ್ಯ ಬಾಬುರಾವ್ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಕಾರಿ ಚಂದ್ರಶೇಖರ ನಾಯಕಗೆ ಗುರುವಾರ ಮನವಿ ಸಲ್ಲಿಸಿ, ಕಲಬುರಗಿ ಮತ್ತು ಬೆಂಗಳೂರು ಮಧ್ಯ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಿದ್ದು, ವಂದೇ ಭಾರತ್ ರೈಲು ಸಂಚಾರದಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ದೇಶದ ವಿವಿಧ ರಾಜ್ಯಗಳಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಇದುವರೆಗೂ ವಂದೇ ಭಾರತ್ ರೈಲು ಸೇವೆ ಆರಂಭಿಸಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಮತ್ತು ರಾಜಧಾನಿ ಬೆಂಗಳೂರು ಸಂಪರ್ಕಿಸುವ ಹೈಸ್ಪೀಡ್ ರೈಲು ಸಂಚಾರ ಅಗತ್ಯವಿದೆ.
ಗುಂತಕಲ್ ವಿಭಾಗದಲ್ಲಿ ರಾಯಚೂರು, ಕಲಬುರಗಿ, ಯಾದಗಿರಿ ರೈಲು ನಿಲ್ದಾಣಗಳು ಇಲಾಖೆಗೆ ಹೆಚ್ಚಿನ ಆದಾಯ ನೀಡುತ್ತಿದ್ದು, ಈಗ ಸಂಚರಿಸುವ ರೈಲುಗಳಲ್ಲಿ ಜಿಲ್ಲೆಯವರಿಗೆ ಸೀಟುಗಳ ಲಭ್ಯತೆ ಕಡಿಮೆಯಿದೆ. ಹೈಸ್ಪೀಡ್ ರೈಲು ಸಂಚಾರ ಆರಂಭಿಸಿದರೆ ಜಿಲ್ಲೆಯ ಜನರಿಗೆ ಅನುಕೂಲವಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಅಸ್ಕಿಹಾಳ, ಖಾಜಾ ಅಸ್ಲಂ ಅಹ್ಮದ್, ಬಾಬು ಉಪಸ್ಥಿತರಿದ್ದರು.