ಜಿಲ್ಲೆ

ವಂಚಕರ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ್: ಅಧಿಕಾರ ದುರುಪಯೋಗ ಮಾಡಿಕೊಂಡು ಸಂಸ್ಥೆಗೆ ವಂಚಿಸಿ, ಮುಂಬಡ್ತಿ ಪಡೆದುಕೊಂಡ ಈಶಾನ್ಯ ಸಾರಿಗೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಬೀದರ್ ವಿಭಾಗದಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ನೌಕರರು, ಸಂಸ್ಥೆಗೆ ಅನ್ಯಾಯ ಮಾಡಿದವರು ಮುಂಬಡ್ತಿ ಪಡೆದುಕೊಂಡು ದರ್ಬಾರ್ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸುವಂಥ ಕಾರ್ಮಿಕ ಮುಖಂಡರು, ನೌಕರರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಚಂದ್ರಕಾಂತ ಫುಲೇಕರ್ ಅವರು ಈ ಹಿಂದೆ ವಿಭಾಗದಲ್ಲಿ ಸಂಚಾರ ಅಧಿಕಾರಿಯಾಗಿ ಕೆಲಸದಲ್ಲಿದ್ದರು. ಆಗ ಅವರ ಅವಧಿಯಲ್ಲಿ ಸುಮಾರು 59 ಲಕ್ಷ ರೂ. ಹಗರಣ ನಡೆದಿದೆ. ಘಟಕ-1ರಲ್ಲಿ ನಡೆದಿರುವ ಹಗರಣದಲ್ಲಿ ಫುಲೇಕರ್ ಮೂಲ ಜವಾಬ್ದಾರರಾಗಿದ್ದಾರೆ. ಆದರೆ ಕೇವಲ 7 ನೌಕರರನ್ನು ಆರೋಪಿಯನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ತನಿಖೆಯನ್ನು ವಿಳಂಬ ಮಾಡಿ ಈ ಅಧಿಕಾರಿಗೆ ಮುಂಬಡ್ತಿ ನೀಡಲಾಗಿದೆ ಎಂದು ದೂರಿದ್ದಾರೆ.

ಹಿಂದಿನ ಪ್ರಕರಣ ಮೇಲೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು. ಫುಲೇಕರ್ ಅವರಿಗೆ ಹಿಂಬಡ್ತಿಗೊಳಿಸಬೇಕು. ಭದ್ರತಾ ವೈಫಲ್ಯದಿಂದ ಸಾರಿಗೆ ಆದಾಯ ಸೋರಿಕೆ ಕಂಡುಹಿಡಿಯಲು ವಿಫಲರಾದ ಭದ್ರತಾ ಮತ್ತು ಜಾಗೃತಾಧಿಕಾರಿ ಮಲ್ಲಿಕಾರ್ಜುನ ಬೋಳಾರೆಡ್ಡಿ ಹಾಗೂ ಭದ್ರತಾ ನಿರೀಕ್ಷಕ ಎಸ್.ಕೆ.ಮಲ್ಲಿಕಾರ್ಜುನ ಅವರನ್ನು ವರ್ಗ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬೇಡಿಕೆ ಸಂಬಂಧ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ರವಾನಿಸಲಾಗಿದೆ. ಸಂಘದ ಬೀದರ್ ವಿಭಾಗದ ಅಧ್ಯಕ್ಷ ರಾಹುಲ್ ಕಂಟೆ, ಕಾರ್ಯಾಧ್ಯಕ್ಷ ವಿಜಯಪ್ರಕಾಶ ಸಿಂಧೆ, ಪ್ರಧಾನ ಕಾರ್ಯದರ್ಶಿ ಎಸ್.ಎನ್.ಟೈಗರ್, ಉಪಾಧ್ಯಕ್ಷ ಮಲ್ಲಿಕಾರ್ಜುನ ರಾಜೋಳಕರ್ ಇತರರಿದ್ದರು.