ಸವಣೂರ: ಆರೋಗ್ಯ ಇಲಾಖೆ ಅಧಿಕಾರಿ ಎಂದು ಹೇಳಿ ಪಾನ್ಶಾಪ್ನವರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಧರ್ಮದೇಟು ನೀಡಿ, ಸವಣೂರ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಭದ್ರಾವತಿ ಮೂಲದ ಸೈಯದ್ ಇಸ್ಮಾಯಿಲ್ ಸೈಯದ್ ಅಜೀಜ್ ಜನರಿಂದ ಏಟು ತಿಂದ ಆರೋಪಿ. ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ವಿವಿಧ ಅಧಿಕಾರಿಗಳು ಎ. ಷಾಹಿದ್ಪಾಷಾ ಬಿನ್ ಅನ್ವರ್ ಹೆಸರಿಗೆ ನೀಡಲಾದ ಅನುಮತಿ ಪತ್ರಗಳ ಕಲರ್ ಜೆರಾಕ್ಸ್ ಪ್ರತಿಗಳನ್ನಿಟ್ಟುಕೊಂಡು ಸವಣೂರಿನ ಪಾನ್ಶಾಪ್ಗಳಿಗೆ ಮಂಗಳವಾರ ತೆರಳಿ, ‘ನಾನು ಆರೋಗ್ಯ ಇಲಾಖೆಯಿಂದ ಬಂದಿದ್ದೇನೆ. ನೀವು ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದೀರಿ, ನೀವು ಧೂಮಪಾನ ನಿಷೇಧಿತ ಪ್ರದೇಶವೆಂಬ ಬ್ಯಾನರ್ ಹಾಕಿಕೊಂಡು ಮಾರುತ್ತಿದ್ದೀರಿ. ಹೀಗಾಗಿ, 200 ರೂಪಾಯಿ ಪಾವತಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕೇಸ್ ಮಾಡುತ್ತೇನೆ’ ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಆಗ ಕೆಲವು ಯುವಕರು, ‘ನಿನ್ನ ಬಳಿ ದಾಖಲೆ ಏನಿದೆ? ಗುರುತಿನ ಚೀಟಿ ತೋರಿಸು’ ಎಂದು ಪ್ರಶ್ನಿಸಿದ್ದಾರೆ. ಆರೋಪಿ ಸೈಯದ್ ಇಸ್ಮಾಯಿಲ್ ತಡವರಿಸಿದ್ದಾನೆ. ಸಂಶಯಗೊಂಡ ಸಾರ್ವಜನಿಕರು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದಕ್ಕೂ ಮುನ್ನ ಸೈಯದ್ ಇಸ್ಮಾಯಿಲ್ ಸವಣೂರ ತಾಲೂಕು ಆರೋಗ್ಯ ಇಲಾಖೆ ಕಚೇರಿಗೆ ತೆರಳಿದ್ದ. ಆಗ ಕಚೇರಿ ಅಧಿಕಾರಿಗಳು, ‘ನಿಮಗೆ ಮೇಲಧಿಕಾರಿಗಳ ಯಾವುದೇ ಆದೇಶವಿಲ್ಲ. ಸವಣೂರಿನಲ್ಲಿ ಬ್ಯಾನರ್ ಅಂಟಿಸಿ ದಂಡ ವಸೂಲಿ ಮಾಡಬೇಡಿ’ ಎಂದು ತಾಕೀತು ಮಾಡಿ ಕಳುಹಿಸಿದ್ದಾರೆ. ನಂತರ ಆರೋಪಿ, ಪೊಲೀಸ್ ಠಾಣೆಗೆ ತೆರಳಿ, ‘ಸರ್, ನಾನು ಈ ಹಿಂದೆ ಜಾಗೃತಿ ಮೂಡಿಸಲು ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬ್ಯಾನರ್ ಅಳವಡಿಸಲು ಅನುಮತಿ ಪತ್ರ ಪಡೆದಿದ್ದೇನೆ’ ಎಂದು ಹೇಳಿದ್ದ. ಅದಕ್ಕೆ ಸಿಪಿಐ ಎಸ್. ದೇವಾನಂದ ಅವರು, ‘ಜನರಿಂದ ಯಾವುದೇ ಹಣ ವಸೂಲಿ ಮಾಡಬೇಡಿ’ ಎಂದು ತಾಕೀತು ಮಾಡಿ ಕಳುಹಿಸಿದ್ದರು. ಬಳಿಕ ಸೈಯದ್ ಇಸ್ಮಾಯಿಲ್ ಪಿಎಸ್ಐ ಜೀಪ್ನಲ್ಲಿ ತೆರಳಿ ಮಾರುಕಟ್ಟೆಯಲ್ಲಿ ಇಳಿದಿದ್ದನ್ನು ಕಂಡು ಜನತೆ ಈತ ಆರೋಗ್ಯ ಇಲಾಖೆ ಅಧಿಕಾರಿ ಇರಬಹುದು ಎಂದು ತಿಳಿದು ವಂಚನೆಗೊಳಗಾಗಿದ್ದಾರೆ. ಇಂಥ ವಂಚಕನನ್ನು ಪಿಎಸ್ಐ ಶಿವಣ್ಣವರ ಏಕೆ ಜೀಪಿನಲ್ಲಿ ಕರೆದುಕೊಂಡು ತಿರುಗಾಡಿದರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.