ಕೊಪ್ಪ ಬಿಜೆಪಿ ಕಚೇರಿಯಲ್ಲಿ ಲ್ಯಾಂಪ್ ಸೊಸೈಟಿ ನೂತನ ಉಪಾಧ್ಯಕ್ಷ ಎಂ.ಸಿಯೋಗೇಶ್ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ್ ನಾಯ್ಕ, ಮುತ್ತಪ್ಪ, ದಿನೇಶ್ ಹೊಸೂರು ಇತರರಿದ್ದರು. 
ಜಿಲ್ಲೆ

ಲ್ಯಾಂಪ್ ಸೊಸೈಟಿ ಅಭಿವೃದ್ಧಿ ಗುರಿಯಾಗಲಿ

ಕೊಪ್ಪ: ಬಿಜೆಪಿ ಕಾರ್ಯಕರ್ತರ ಹೋರಾಟದಿಂದ ಲ್ಯಾಂಪ್ ಸಂಸ್ಥೆಯಲ್ಲಿ ಜಯ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಲ್ಯಾಂಪ್ ಸಂಸ್ಥೆ ಹಾಗೂ ಬಿಜೆಪಿಯನ್ನು ಇನ್ನಷ್ಟು ಸದೃಢವಾಗಿ ಕಟ್ಟಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಲ್ಯಾಂಪ್ ಸಂಸ್ಥೆ ಉಪಾಧ್ಯಕ್ಷ ಯೋಗೇಶ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಈ ಹಿಂದೆಯೂ ಲ್ಯಾಂಪ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ ಕೆಲವರ ಸ್ವಹಿತ ಹೆಚ್ಚಾಗಿ ಪಕ್ಷದ ಕಾರ್ಯವನ್ನು ಬಿಟ್ಟರು. ಆದ್ದರಿಂದ ನಮಗೆ ಹಿನ್ನಡೆಯಾಗುತ್ತ ಬಂದಿದೆ. ಹಿಂದಿನ ತಪ್ಪು ಮರುಕಳಿಸಬಾರದು. ಕಾರ್ಯಕರ್ತರ ಷೇರುಗಳನ್ನು ಹಾಕಿಸಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಸುಲಭವಾಗಿ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದರು.

ಲ್ಯಾಂಪ್ ಸಹಕಾರ ಮಹಾಮಂಡಲದ ಉಪಾಧ್ಯಕ್ಷ ಮಂಜುನಾಥ್ ನಾಯ್ಕ ಮಾತನಾಡಿ, ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಅವಕಾಶಗಳು ಇವೆ. ತಾಳ್ಮೆ, ಪಕ್ಷದ ನಿಷ್ಠೆ ಎಲ್ಲವನ್ನೂ ತಂದುಕೊಡುತ್ತದೆ. ಲ್ಯಾಂಪ್‌ನಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಉತ್ತಮವಾಗಿ ಬಳಸಿಕೊಳ್ಳಿ ಎಂದರು.

ಲ್ಯಾಂಪ್ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಮುತ್ತಪ್ಪ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿ ಇದ್ದರೆ ಮಾತ್ರ ಅಭಿವೃದ್ಧಿ. ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಗಳು ಶೂನ್ಯ. ಡಿ.ಎನ್.ಜೀವರಾಜ್ ಶಾಸಕರಾಗಿದ್ದ ವೇಳೆ ಆದ ಕೆಲಸಗಳು ಮಾತ್ರ ಕಾಣುತ್ತಿವೆಯೆ ಹೊರತು ಈಗಿನ ಶಾಸಕರ ಅಭಿವೃದ್ಧಿ ಕೆಲಸಗಳು ಕಾಣುತ್ತಿಲ್ಲ ಎಂದು ಹೇಳಿದರು.

ಬಿಜೆಪಿ ಮುಖಂಡ ಪದ್ಮನಾಭ ಮಾತನಾಡಿ, ಚುನಾವಣೆ ಫಲಿತಾಂಶ ಹೊರಬಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ 10, ಬಿಜೆಪಿ 3 ಸ್ಥಾನ ಪಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸಿದ್ದರು. ಇದನ್ನು ಸವಾಲಾಗಿ ತೆಗೆದುಕೊಂಡು ಕೈ ಬೆಂಬಲದಿಂದ ಗೆದ್ದವರನ್ನು ರಾತ್ರೋ ರಾತ್ರಿ ಮಾತನಾಡಿಸಿ, ಕಾಂಗೆಸ್ ಬೆಂಬಲದಿಂದ ಗೆದ್ದ ಎಂ.ಸಿ.ಯೋಗೇಶ್ ಅವರನ್ನು ಬಿಜೆಪಿಗೆ ಸೆಳೆದು ಉಪಾಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದು ಹೇಳಿದರು.

ನೂತನ ಉಪಾಧ್ಯಕ್ಷ ಎಂ.ಸಿ.ಯೋಗೇಶ್ ಮಾತನಾಡಿ, ನಾನು ಕಾಂಗ್ರೆಸ್‌ನಲ್ಲಿ ಇದ್ದಿದ್ದರೆ ಉಪಾಧ್ಯಕ್ಷನಾಗಿ ಆಯ್ಕೆಯಾಗುತ್ತಿರಲಿಲ್ಲ. ಬಿಜೆಪಿಗೆ ಬಂದ ಕಾರಣ ಅಧಿಕಾರ ಸಿಕ್ಕಿದೆ. ಕಾಂಗ್ರೆಸ್‌ನಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ. ಬೂತ್ ಅಧ್ಯಕ್ಷ ಮಾಡಿದ್ದರೆ ಹೊರತು ಬೇರೆ ಯಾವುದೇ ಹುದ್ದೆಯನ್ನು ಕಾಂಗ್ರೆಸ್ ನೀಡಿರಲಿಲ್ಲ. ಈಗ ಬಿಜೆಪಿ ಜತೆ ನಿಂತು ಕೆಲಸ ಮಾಡುತೇನೆ. ಕ್ಷೇತ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದ ಅಧಿಕಾರ ಸಿಕ್ಕಿದೆ. ಪಕ್ಷವನ್ನು ಕಟ್ಟುವ ಕೆಲಸ ಮಡೋಣ ಎಂದರು.

ಇತ್ತೀಚೆಗೆ ನಡೆದ ಲ್ಯಾಂಪ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು 10, ಬಿಜೆಪಿ ಬೆಂಬಲಿತರು 3 ಸ್ಥಾನಗಳನ್ನು ಪಡೆದುಕೊಂಡಿದ್ದರು. ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿತ್ತು. ಆದರೆ ಮಂಗಳವಾರ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ರಾತ್ರೋರಾತ್ರಿ ಮಾಡಿದ ಆಪರೇಷನ್ ಕಮಲ ಸಫಲವಾಗಿದೆ. ಕೇವಲ 3 ನಿರ್ದೇಶಕರಿದ್ದ ಬಿಜೆಪಿ, ಆಪರೇಷನ್ ಮೂಲಕ ಕೈ ಬೆಂಬಲಿತರನ್ನು ಸೆಳೆದು 9 ಮತಗಳನ್ನು ಗಿಟ್ಟಿಸಿಕೊಂಡಿದೆ. ಕಾಂಗ್ರೆಸ್ 7 ಮತಗಳನ್ನು ಪಡೆಯುವಲ್ಲಿ ಮಾತ್ರ ಶಕ್ತವಾಯಿತು. ಬಿಜೆಪಿಯ ಆಪರೇಷನ್‌ಗೆ ಒಳಗಾಗಿದ್ದ ಎಂ.ಸಿ.ಯೋಗೇಶ್ 9 ನಿರ್ದೇಶಕರ ಮತವನ್ನು ಪಡೆದುಕೊಂಡರೇ, ಕಾಂಗ್ರೆಸ್ ಬೆಂಬಲದಿಂದ ಸ್ಪರ್ಧೆ ಬಯಸಿದ್ದ ಮಹೇಶ್ ಶೆಟ್ಟಿಕೊಪ್ಪ 7 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು 5 ಜನ ಅಡ್ಡ ಮತದಾನ ಮಾಡಿದರು. ಲ್ಯಾಂಪ್ ಸಹಕಾರ ಮಹಾಮಂಡಲದ ಉಪಾಧ್ಯಕ್ಷರೂಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ವಸಂತಿ ಕಾರ್ಯನಿರ್ವಹಿಸಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಕಾರ್ಯದರ್ಶಿ ಸತೀಶ್ ಅದ್ದಡ, ಜಿಲ್ಲಾ ಉಪಾಧ್ಯಕ್ಷ ಮಹಾಬಲ್ ರಾವ್, ತಾಲೂಕು ವಕ್ತಾರ ಎಚ್.ಆರ್.ಜಗದೀಶ್ ಇತರರಿದ್ದರು.