ಜಿಲ್ಲೆ

ಲೌಕಿಕ ಮೋಹ ಕಳಚಿಕೊಂಡಾಗ ಭಗವಂತನ ಸಾನ್ನಿಧ್ಯ

ಶಿರಸಿ: ಧರ್ವಚರಣೆ ಮೂಲಕ ಲೌಕಿಕದ ಮೋಹ ಕಳೆದುಕೊಂಡರೆ ಭಗವಂತನ ಸಾನ್ನಿಧ್ಯ ಸಾಧ್ಯ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಸ್ವರ್ಣವಲ್ಲೀ ಸಂಸ್ಥಾನದ ಅಂಗಸಂಸ್ಥೆ ಯೋಗ ಮಂದಿರದ 23ನೇ ವಾರ್ಷಿಕೋತ್ಸವಕ್ಕೆ ಭಾನುವಾರ ಚಾಲನೆ ನೀಡಿ ಅವರು ಆಶೀರ್ವದಿಸಿದರು. ಪ್ರತಿಯೊಬ್ಬರೂ ಭಗವಂತನ ಉಪಾಸನೆ ಮಾಡಬೇಕು. ದೇವರ ಸ್ಮರಣೆಯಲ್ಲಿ ಲೌಕಿಕದ ಮೋಹ ಕಳಚಿಕೊಳ್ಳಬೇಕು. ಹಾಗಾದರೆ ಭಗವಂತನ ಸಾಯುಜ್ಯ ಸಾಧ್ಯ ಎಂದರು.

ಯೋಗ ಪ್ರತಿಯೊಬ್ಬರ ಜೀವನದಲ್ಲಿ ಜಾರಿಗೆ ಬರಬೇಕು. ಆರೋಗ್ಯಯುತ ಜೀವನ ಹಾಗೂ ಜೀವನದ ಲಕ್ಷ್ಯ ಪಡೆಯಲು ಯೋಗದಿಂದ ಸಾಧ್ಯ. ಶರೀರ ಹಾಗೂ ಮನಸಿನ ಆರೋಗ್ಯ ವೃದ್ಧಿಸಲು ಇದು ಪೂರಕ. ಇದೇ ಉದ್ದೇಶದಿಂದ ಯೋಗ ಮಂದಿರ ಸ್ಥಾಪಿಸಿ ವರ್ಷಾವಧಿ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದ ಶ್ರೀಗಳು, ಶಂಕರ ಭಗವತ್ಪಾದರು ವಿಶ್ವದ ಇತಿಹಾಸದ ಧ್ರುವ ನಕ್ಷತ್ರ. ಅದರ ಪ್ರಭೆ ಎಂದಿಗೂ ಕುಂದುವುದಿಲ್ಲ. ಭಾರತೀಯ ಇತಿಹಾಸ ಪರಿವರ್ತನೆಯ ವ್ಯಕ್ತಿತ್ವ ಅವರದಾಗಿತ್ತು. ಅವರ ಪರಂಪರೆಯ ಯತಿಯಾಗಿದ್ದು ಸಾರ್ಥಕತೆ ತಂದಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಹಿರಿಯರಾದ ನಾ.ಸು. ಭರತನಹಳ್ಳಿ, ಟಿ.ಎಂ.ಎಸ್. ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ, ಟಿ.ಎಸ್.ಎಸ್. ಅಧ್ಯಕ್ಷ ಶಾಂತಾರಾಮ ಹೆಗಡೆ ಶಿಗೇಹಳ್ಳಿ, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರನ್ನು ಶ್ರೀಗಳು ಸನ್ಮಾನಿಸಿದರು.

ಪ್ರಮುಖರಾದ ಜಿ.ಎನ್. ಹೆಗಡೆ ಹಿರೇಸರ, ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಮಾತೃ ಮಂಡಳಿ ಅಧ್ಯಕ್ಷೆ ವೇದಾ ಹೆಗಡೆ, ಸರೋಜಿನಿ ಹೆಗಡೆ, ಮಠದ ಹವ್ಯಕ ಮಂಡಲದ ಪದಾಧಿಕಾರಿ ಶಿವಾನಂದ ದೀಕ್ಷಿತ, ಇತರರು ಉಪಸ್ಥಿತರಿದ್ದರು. ಎಸ್.ಎಸ್. ಭಟ್ಟ ಉಪಾಧ್ಯ ಸ್ವಾಗತಿಸಿದರು. ಸಿ.ಎಸ್. ಹೆಗಡೆ ವರದಿ ವಾಚಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ರುದ್ರ ಹವನ, ಶತರುದ್ರ, ಸಾಮೂಹಿಕ ಗಣಹವನ, ಕುಂಕುಮಾರ್ಚನೆ, ಶ್ರೀಗಳ ಪಾದಪೂಜೆ, ಭಿಕ್ಷೆ ನೆರವೇರಿತು.