ಚಿತ್ರದುರ್ಗ: ರಾಜ್ಯದಲ್ಲಿ ರೈತರ ಜಮೀನುಗಳಿಗೆ ಹಿಂದಿನಂತೆ 7 ಗಂಟೆ ಸಮರ್ಪಕ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಆದರೆ, ಇದಕ್ಕಾಗಿ ಪೀಕ್ ಸಮಯ ಹೊರತುಪಡಿಸಿ ಇನ್ನುಳಿದ ಅವಧಿ ನಿಗದಿಯಾಗಲಿದೆ ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಯಚೂರು ಥರ್ಮಲ್ ವಿದ್ಯುತ್ ಕೇಂದ್ರದಲ್ಲೂ ಉತ್ಪಾದನೆ ಕ್ಷೀಣಿಸಿದೆ. ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಕಡಿಮೆ ಮಾಡಿದೆ. ಆದರೂ ಲೋಡ್‌ಶೆಡ್ಡಿಂಗ್ ಸಮಸ್ಯೆ ತ್ವರಿತವಾಗಿ ಬಗೆಹರಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಪ್ರತಿಕ್ರಿಯಿಸಿದರು.
ಸಿಎಂ ಸಿದ್ದರಾಮಯ್ಯ ಸಂಪೂರ್ಣ ಸ್ವತಂತ್ರರಾಗಿದ್ದಾರೆ. ಹೀಗಾಗಿ ಉತ್ತಮ ಬಜೆಟ್ ಕೊಟ್ಟರು. ಜತೆಗೆ ಬರಗಾಲವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಬಿಜೆಪಿಗರಿಗೆ ಅನುಭವ ಕಡಿಮೆ ಎಂದು ಟೀಕಿಸಿದರು.
ನಾನೂ 2008ರಿಂದ 2013 ರವರೆಗೆ ಬಿಜೆಪಿಯವರ ಜತೆ ಇದ್ದ ಅವಧಿಯಲ್ಲಿ ನಾಲ್ವರು ಮುಖ್ಯಮಂತ್ರಿಯಾದರು. ಆದರೆ, 2013ರಿಂದ 2018ರವರೆಗೂ ಸಿದ್ದರಾಮಯ್ಯ ಒಬ್ಬರೇ ಇದ್ದರು. ರಾಜ್ಯದಲ್ಲಿ ಎರಡೂವರೆ ವರ್ಷದ ನಂತರ ಪವರ್ ಶೇರಿಂಗ್ ಇಲ್ಲ. ಅದು ನನ್ನ ವ್ಯಾಪ್ತಿಗೂ ಬರುವುದಿಲ್ಲ. ಹೈಕಮಾಂಡ್ ಸೂಚಿಸಿದರೆ ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕಾಂಗ್ರೆಸ್ಸಿಗರು ಆಪರೇಷನ್ ಹಸ್ತ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದರು.