ಜಿಲ್ಲೆ

ಲೋಕ್ ಅದಾಲತ್‌ನಲ್ಲಿ ಒಂದಾದ ಜೋಡಿಗಳು

ಚಾಮರಾಜನಗರ: ಸುಮಾರು 5 ವರ್ಷಗಳ ಹಿಂದೆ ಕೌಟುಂಬಿಕ ಕಲಹದಿಂದ ದೂರಾಗಿದ್ದ ದಂಪತಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನಡೆಸುವ ಲೋಕ್ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಒಂದಾದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಶನಿವಾರ ಆಯೋಜಿಸಿದ್ದ ಲೋಕ್‌ಅದಾಲತ್‌ನಲ್ಲಿ ಗುಂಡ್ಲುಪೇಟೆಯ ಅನಿಲ್‌ರಾಜ್ ಹಾಗೂ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಭಾಗೀರಥಿ ದಂಪತಿಗಳೇ ಹಿಂದಿನ ಮನಸ್ತಾಪಗಳನ್ನು ಮರೆತು ವಿಚ್ಛೇದನದ ಮಾರ್ಗವನ್ನು ಕೈಬಿಟ್ಟರು.

ಈ ದಂಪತಿಗಳ ನಡುವೆ ಉಂಟಾಗಿದ್ದ ಕೌಟುಂಬಿಕ ಕಳಹದಿಂದಾಗಿ ವಿವಾಹ ವಿಚ್ಛೇದನ ಹಾಗೂ ಜೀವನಾಂಶವನ್ನು ಕೋರಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಕಳೆದ 5 ವರ್ಷಗಳಿಂದಲೂ ಪ್ರಕರಣ ನಡೆದುಕೊಂಡು ಬರುತ್ತಿತ್ತು. ಅದರಂತೆ ಶನಿವಾರ ನಡೆದ ಲೋಕ್ ಅದಾಲತ್‌ನಲ್ಲಿ ದಂಪತಿಗಳು ಪರಸ್ಪರ ಒಪ್ಪಿಗೆ ಸೂಚಿಸುವ ಮೇರೆಗೆ ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿಕೊಂಡರು. ಹಿಂದಿನ ಮನಸ್ತಾಪಗಳನ್ನು ಮರೆತು ಮತ್ತೆ ಒಂದಾದರು. ಅನಿಲ್‌ರಾಜ್ ಅವರ ಪರವಾಗಿ ವಕೀಲ ಸಿದ್ದರಾಜು ಮತ್ತು ಭಾಗೀರಥಿ ಅವರ ಪರವಾಗಿ ವಲೀಕ ನಂಜಯ್ಯ ವಾದ ಮಂಡಿಸಿದ್ದರು. ಈ ವಕೀಲರ ಸಮ್ಮುಖದಲ್ಲಿ ದಂಪತಿಗಳು ಒಂದಾದರು.

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ, ಹಿರಿಯ ನ್ಯಾಯಾಧೀಶರಾದ ಕೃಷ್ಣ, ಲೋಕಪ್ಪ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ, ಪ್ರಧಾನ ಕಾರ್ಯದರ್ಶಿ ದೊಡ್ಡಮೋಳೆ ರಂಗಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.

ಹಲವಾರು ಪ್ರಕರಣಗಳ ಇತ್ಯರ್ಥ:

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರು ನ್ಯಾಯಾಲಯಗಳಲ್ಲಿ ಬಾಕಿಇದ್ದ, ರಾಜೀಯಾಗಬಲ್ಲ ಹಾಗೂ ವ್ಯಾಜ್ಯಪೂರ್ವ ಹಲವಾರು ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಯಿತು. ರಾಜೀಯಾಗಲು ಯೋಗ್ಯವಾದ ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಚೆಕ್ ಅಮಾನ್ಯ, ಸಾಲ ವಸೂಲಾತಿ, ವಾಹನ ಅಪಘಾತ ಪರಿಹಾರ, ಕಾರ್ಮಿಕರ ವಿವಾದಗಳು, ಭೂಮಿ ಸ್ವಾಧೀನ ಪ್ರಕರಣಗಳು ಹಾಗೂ ಇನ್ನಿತರೆ ಪ್ರಕರಣಗಳನ್ನು ಕಕ್ಷಿದಾರರು ಹಾಗೂ ವಕೀಲರ ಸಮ್ಮುಖದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.