ಚಾಮರಾಜನಗರ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜು.12 ರಂದು ನಡೆದ ಲೋಕ್ ಅದಾಲತ್‌ನಲ್ಲಿ 1,01,431 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ ಮಾಹಿತಿ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ 13 ನ್ಯಾಯಾಲಯಗಳಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ಚಾಮರಾಜನಗರ 435, ಯಳಂದೂರು 783, ಕೊಳ್ಳೇಗಾಲ 1678 ಹಾಗೂ ಗುಂಡ್ಲುಪೇಟೆಯಲ್ಲಿ 375 ನ್ಯಾಯಾಲಯ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಚಾಮರಾಜನಗರ 64,908, ಯಳಂದೂರು 9524, ಕೊಳ್ಳೇಗಾಲ 15,232 ಹಾಗೂ ಗುಂಡ್ಲುಪೇಟೆ ನ್ಯಾಯಾಲಯದಲ್ಲಿ 8496 ಪ್ರಕರಣಗಳನ್ನು ಇತ್ಯರ್ಥಗಳಿಸಲಾಯಿತು. ಒಟ್ಟಾರೆ 3271 ನ್ಯಾಯಾಲಯದ ಪ್ರಕರಣ ಮತ್ತು 98,160 ವ್ಯಾಜ್ಯಪೂರ್ವ ಪ್ರಕರಣಗಳನ್ನು ಒಳಗೊಂಡಂತೆ 1,01,431 ಪ್ರಕರಣಗಳನ್ನು ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ ಸಮ್ಮುಖದಲ್ಲಿ ಇತ್ಯರ್ಥಗೊಳಿಸಲಾಯಿತು ಎಂದು ತಿಳಿಸಿದರು.
ಕಳೆದ ಲೋಕ್ ಅದಾಲತ್‌ನಲ್ಲಿ 74 ಸಾವಿರ ಪ್ರಕರಣಗಳು ಇತ್ಯರ್ಥವಾಗಿದ್ದವು. ಈ ಬಾರಿ ದಾಖಲೆ ಪ್ರಮಾಣದಲ್ಲಿ 1 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಸಮಯ ಉಳಿತಾಯವಾಗಿರುವುದಲ್ಲದೇ, ನ್ಯಾಯಾಲಯಗಳ ಮೇಲಿನ ಹೊರೆಯೂ ತಗ್ಗಿದಂತಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ ಹಾಜರಿದ್ದರು.
8.64 ಕೋಟಿ ರೂ, ದಂಡ ಮತ್ತು ಪರಿಹಾರ:
ಈ ಬಾರಿಯ ಲೋಕ್ ಅದಾಲತ್‌ನಲ್ಲಿ ನ್ಯಾಯಾಲಯದ 3271 ಪ್ರಕರಣಗಳಲ್ಲಿ 7.51 ಕೋಟಿ ರೂ, ಮತ್ತು 98,160 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 8.64 ಕೋಟಿ ರೂ, ಹಣವನ್ನು ಒಳಗೊಂಡಂತೆ ಒಟ್ಟು 1,01,431 ಪ್ರಕರಣಗಳಿಂದ 16.15 ಕೋಟಿ ರೂ, ಹಣವನ್ನು ದಂಡ ಮತ್ತು ಪರಿಹಾರ ರೂಪದಲ್ಲಿ ನೀಡಲಾಯಿತು.
ತಂದೆಗೆ ದೊರೆಯಿತು ಮಕ್ಕಳ ಪ್ರೀತಿ: ಈ ಬಾರಿಯ ಲೋಕ್ ಅದಾಲತ್‌ನಲ್ಲಿ 3 ವಿಶೇಷ ಪ್ರಕರಣಗಳಲ್ಲಿ ದೂರವಾಗಿದ್ದ ದಂಪತಿಗಳು ಒಂದಾದರೇ, ಮತ್ತೊಂದು ಪ್ರಕರಣದಲ್ಲಿ ದೂರವಿದ್ದ ತಂದೆ ಮತ್ತು ಮಕ್ಕಳು ಒಂದಾಗುವ ಅವಕಾಶ ದೊರೆಯಿತು. ಒಂದು ವಿಶೇಷ ಪ್ರಕರಣದಲ್ಲಿ ಗಂಡನಿಂದ ದೂರಾಗಿದ್ದ ಪತ್ನಿ ಬೇರೊಬ್ಬರನ್ನು ಮದುವೆಯಾಗಿದ್ದರು. ಆದರೆ ಅವರ ಇಬ್ಬರು ಮಕ್ಕಳು ಅಜ್ಜಿಯ ಮನೆಯಲ್ಲಿ ವಾಸವಿದ್ದರು. ತಂದೆ ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈ ಪ್ರಕರಣದಲ್ಲಿ ವಾರದಲ್ಲಿ 1 ದಿನ ಮತ್ತು ವಿಶೇಷ ರಜೆಯ ದಿನಗಳಲ್ಲಿ ತಂದೆಯ ಬಳಿ ಇರುವಂತೆ ನ್ಯಾಯಾಧೀಶರು ಅವಕಾಶ ಕಲ್ಪಿಸಿದರು.
ಈ ಬಾರಿ ಲೋಕ್ ಅದಾಲತ್ ಬಹಳ ಯಶಸ್ವಿಯಾಗಿ ನಡೆದಿದೆ. 10-15 ವರ್ಷ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳನ್ನು ಒಳಗೊಂಡಂತೆ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಹಾಗೂ ಇನ್ನಿತರರ ಸಹಕಾರದಿಂದ ಸುಮಾರು 1 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಜಿ.ಪ್ರಭಾವತಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯ, ಚಾಮರಾಜನಗರ