ಹಾಸನ : ಅರಸೀಕೆರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಇದನ್ನು ಸಹಿಸಿಕೊಳ್ಳಲಾಗದೆ ಕೆಲವರು ಅಧಿಕಾರಿಗಳನ್ನು ಬೆದರಿಸುವುದು, ನನ್ನ ಮೇಲೆ ಲೋಕಾಯುಕ್ತದಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲು ಮಾಡುವ ಮೂಲಕ ಅಭಿವೃದ್ಧಿಗೆ ಕಂಟಕಪ್ರಾಯರಾಗಿದ್ದಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ತೇಜೋವಧೆ ಮಾಡಲು ಬಿಜೆಪಿ ಪಕ್ಷದ ವಕ್ತಾರ ಹಾಗೂ ಆರ್‌ಟಿಐ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಎನ್.ಆರ್.ರಮೇಶ್ ಎಂಬಾತ ಲೋಕಾಯುಕ್ತದಲ್ಲಿ 250 ಕೋಟಿ ರೂ. ಅವ್ಯವಹಾರದ ಆರೋಪ ಮಾಡಿ ದೂರು ನೀಡಿದ್ದಾರೆ. ಈತನಿಗೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅರಿವಿಲ್ಲದೆ ಕೆಲವರ ಚಿತಾವಣೆಯಿಂದ ದೂರು ನೀಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆ , ಕಾವೇರಿ ನೀರಾವರಿ ನಿಗಮ ಮತ್ತು ಹಲವು ನಿಗಮಗಳಿಂದ ಚೆಕ್‌ಡ್ಯಾಂ ನಿರ್ಮಾಣಕ್ಕೆ ಹಣ ನಿಗದಿಯಾಗಿತ್ತು. ಆದರೆ ಅದನ್ನು ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ಇದು ಕೂಡ ಸಂಬಂಧಪಟ್ಟ ಸಚಿವರ ಆದೇಶದ ಮೇರೆಗೆ ಕಾಮಗಾರಿ ಮಾಡಲಾಗಿದೆ. ಈ ರೀತಿ ಕಾಮಗಾರಿಯನ್ನು ಮುಖ್ಯಮಂತ್ರಿಗಳಾದಿಯಾಗಿ ರಾಜ್ಯದ 224 ಕ್ಷೇತ್ರಗಳ ಎಲ್ಲಾ ಶಾಸಕರು ಮಾಡಿದ್ದಾರೆ. ಬಿಜೆಪಿಯ ಶಾಸಕರೆ ವಿಶೇಷ ಅನುದಾನದಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರನ್ನೂ ಬಿಟ್ಟು ರಾಜಕೀಯ ದುರುದ್ದೇಶದಿಂದ ನನ್ನ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ ಎಂದರು.
ಅಲ್ಲದೆ ಎತ್ತಿನಹೊಳೆ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುವ ಗ್ರಾಮಗಳಿಗೆ ರಸ್ತೆ ಮಾಡಿಕೊಡಲಾಗಿದೆ. ಆದರೂ ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡಲು ದಲಿತರಿಗೆ ಮೀಸಲಿರಿಸ ಎಸ್‌ಇಪಿ, ಟಿಎಸ್‌ಪಿ ಹಣವನ್ನು ಮೇಲ್ಜಾತಿಗೆ ಖರ್ಚು ಮಾಡಲಾಗಿದೆ ಎಂಬ ಹುನ್ನಾರ ಮಾಡಿದ್ದಾರೆ. ಈ ರೀತಿ ಒಂದೇ ಒಂದು ಕೆಲಸ ಮಾಡಿದ್ದರೆ ಸಿಬಿಐ ತನಿಖೆ ನಡೆಸಲಿ, ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ನನ್ನ ಮೇಲೆ ಗೂಬೆ ಕೂರಿಸಲು ಎ1 ಆರೋಪಿ ಎಂದು ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ನನ್ನದೇನೂ ಪಾತ್ರವಿಲ್ಲ. ನಾನು ಸರ್ಕಾರದಿಂದ ಜನರ ಸೇವಕನಾಗಿ ಹಣ ತರುವುದಷ್ಟೇ ನನ್ನ ಕೆಲಸ. ಕೆಲಸ ಮಾಡುವುದು ಅಧಿಕಾರಿಗಳಿಗೆ ಬಿಟ್ಟಿದ್ದು ಮತ್ತು ಸಂಬಂಧಪಟ್ಟ ಸಚಿವರು ಮತ್ತು ರಾಜ್ಯದ ಎಲ್ಲಾ ಬಿಜೆಪಿ ಶಾಸಕರುಗಳ ಬಗ್ಗೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಲೋಕಾಯುಕ್ತ ನ್ಯಾಯಾಲಯ ನನಗೆ ನೋಟಿಸ್ ನೀಡಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ. ಅಭಿವೃದ್ದಿಯಿಂದ ಜನರ ಮನಸ್ಸು ಗೆದ್ದಿದ್ದೇನೆ ಹೊರತು ಇಂತಹ ನೀಚ ರಾಜಕಾರಣದಿಂದಲ್ಲ. ತಾಲ್ಲೂಕಿನಲ್ಲಿ 530 ಹಳ್ಳಿಗಳಿಗೆ ಕಾಂಕ್ರೀಟ್ ರಸ್ತೆ ಮಾಡಿದ್ದೇನೆ. ನಾನು ಏನು ಎಂಬುದನ್ನು ಚುನಾವಣೆ ಮುಗಿದ ಮೇಲೆ ತೋರಿಸುತ್ತೇನೆ. ನನ್ನ ವಿರುದ್ಧ ಪ್ರಕರಣ ದಾಖಲಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಕುತಂತ್ರಗಳಿಗೆ ಜಗ್ಗುವುದಿಲ್ಲ
ನಾನು ಅರಸೀಕೆರೆಯಲ್ಲಿ ಮೂರು ಬಾರಿ ಶಾಸಕನಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಆದರೆ ಇತ್ತೀಚೆಗೆ ಕ್ಷೇತ್ರಕ್ಕೆ ಬಂದು ನನ್ನ ಬಗ್ಗೆ ಯಾರೇ ಎಷ್ಟೇ ಕುತಂತ್ರ ಮಾಡಿದರೂ ನಾನು ಅವುಗಳಿಗೆ ಜಗ್ಗುವ ಮಗನಲ್ಲ ಎಂದು ಶಿವಲಿಂಗೇಗೌಡ ವಿರೋಧಿಗಳಿಗೆ ತಿರುಗೇಟು ನೀಡಿದರು.
ಚುನಾವಣೆ ಸಂದರ್ಭದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಲು ಮುಂದಾಗಿರುವ ಅವರಿಗೆ ತಿರುಗುಬಾಣವಾಗಲಿದೆ. ನಾಳೆಯಿಂದ ಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ಹೋಗಿ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಮನೆ ಮನೆಗಳಿಗೆ ತಿಳಿಸುತ್ತೇನೆ ಎಂದು ಹೇಳಿದರು.
ಅಭಿವೃದ್ಧಿಗೆ ಕಂಟಕ
ಅರಸೀಕೆರೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಸಹಾಯಕ ಇಂಜಿನಿಯರ್ ಒಬ್ಬರು ಮಾ.17ರಂದು ನಗರದ ಖಾಸಗಿ ಲಾಡ್ಜಿನಲ್ಲಿ ಕಡತಗಳ ನಿರ್ವಹಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎನ್.ಆರ್. ಸಂತೋಷ್ ಬೆಂಬಲಿಗರಾದ ಕಾಟೀಕೆರೆ ಮೋಹನ್, ಬೈರಗೊಂಡನಹಳ್ಳಿಯ ಉಮೇಶ ಸೇರಿದಂತೆ 10ರಿಂದ 11 ಜನ ಲಾಡ್ಜಿಗೆ ನುಗ್ಗಿ ಅಧಿಕಾರಿಯನ್ನು ಹೆದರಿಸಿ, ಸರ್ಕಾರಿ ಕಡತಗಳನ್ನು ಹೊತ್ತೊಯ್ದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮಾ.31ರೊಳಗೆ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಮತ್ತು ಕಾಮಗಾರಿಗಳಾಗಿರುವ ಬಗ್ಗೆ ಅಂದಾಜುಗಳನ್ನು ಲೆಕ್ಕ ಹಾಕುತ್ತಿರುವ ಸಂದರ್ಭದಲ್ಲಿ ಈ ರೀತಿ ಅಧಿಕಾರಿಯನ್ನು ಹೆದರಿಸಿ ಬೆದರಿಸಿ ಕಡತಗಳನ್ನು ಹೊತ್ತೊಯ್ದಿದ್ದಾರಲ್ಲದೆ, 12 ದಿನಗಳವರೆಗೂ ಕಡತಗಳನ್ನು ಆಗ ಕೊಡುವೆ ಈಗ ಕೊಡುವೆ ಎಂದು ಸತಾಯಿಸಿ ನಂತರ ರಾಜಿ ಪಂಚಾಯಿತಿಗೂ ಮುಂದಾಗಿ ಅದು ಫಲಪ್ರದವಾಗದ ಹಿನ್ನೆಲೆಯಲ್ಲಿ ನೆನ್ನೆ ಆ ಅಧಿಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.
ಈ ರೀತಿ ಮಾಡುವುದರಿಂದ ಕಾಮಗಾರಿಯನ್ನು ಮಾಡದಂತೆ ತಡೆಯುವುದು ಇವರ ಉದ್ದೇಶವಾಗಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಕುತಂತ್ರಗಳನ್ನು ಮಾಡುವುದು ಸರಿಯಲ್ಲ. ರಾಜಕಾರಣ ಮಾಡುವವರು ನೇರವಾಗಿ ಮಾಡಲಿ. ಈ ರೀತಿ ಅಭಿವೃದ್ಧಿ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ಮಾಡಬಾರದು. ಎಲ್ಲಾ ಅಭಿವೃದ್ಧಿ ಕೆಲಸಗಳೂ ಆಗಿದ್ದರೆ ನನಗೆ ಹೆಸರು ಬರುತ್ತದೆ. ಚುನಾವಣೆಗೆ ಸಹಕಾರಿಯಾಗುತ್ತದೆ ಎಂದು ಈ ರೀತಿ ವಾಮಮಾರ್ಗ ಅನುಸರಿಸಿದ್ದಾರೆ ಎಂದು ಕಿಡಿಕಾರಿದರು.