ಮೈಸೂರು: ಲೋಕಾಯುಕ್ತಕ್ಕೆ ಬಲ ತುಂಬುವುದರ ಜತೆಗೆ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ತಕ್ಷಣವೇ ಸರ್ಕಾರ ನಿಯೋಜಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸಲಹೆ ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿ ಲೋಕಾಯುಕ್ತ ಮರುಜಾರಿಗೊಳಿಸುವ ಕೆಲಸ ಮಾಡಿದ್ದು ಸ್ವಾಗತಾರ್ಹ. ಎಸಿಬಿ ರದ್ದುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಸಾರ್ವಜನಿಕರೊಬ್ಬರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ, ಸುಪ್ರೀಂಕೋರ್ಟ್ ಎಸಿಬಿ ರದ್ದುಗೊಳಿಸಿದ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ಹಾಗಾಗಿ, ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಮತ್ತಷ್ಟು ಶಕ್ತಿ ಮತ್ತು ಕಾನೂನಿನ ಬಲವನ್ನು ತುಂಬುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಲೋಕಾಯುಕ್ತವನ್ನು ಬಲಪಡಿಸಿ ಭ್ರಷ್ಟಾಚಾರಿಗಳಿಗೆ ಚುರುಕು ಮುಟ್ಟಿಸಬೇಕು. ಈ ವಿಚಾರದಲ್ಲಿ ಸರ್ಕಾರಕ್ಕೂ ಸ್ವಲ್ಪ ದಿನಗಳ ಸಮಯ ನೀಡಬೇಕಾಗಿದೆ. ಹಂತ ಹಂತವಾಗಿ ಭ್ರಷ್ಟಾಚಾರದ ಮುಳ್ಳುಗಳನ್ನು ತೆಗೆಯಬೇಕಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಭ್ರಷ್ಟಾಚಾರ ಮೊದಲಿನಿಂದಲೂ ಇದ್ದರೂ ಈಗ ಅದರ ಗಡಿಯನ್ನು ದಾಟಿ ಮಿತಿಮೀರಿ ಹೋಗಿದೆ. ಭ್ರಷ್ಟಾಚಾರ ಎನ್ನುವುದು ಒಬ್ಬ ವ್ಯಕ್ತಿ, ಸಮಾಜ, ಸರ್ಕಾರಕ್ಕೆ ಎನ್ನುವುದು ಮುಖ್ಯವಲ್ಲ. ನೊಂದ ಜನರಿಗೆ ನ್ಯಾಯ ಮತ್ತು ಲಂಚ ಇಲ್ಲದೆ ಆಡಳಿತ ಸಿಗುವಂತಾಗಬೇಕು ಎಂದು ಪ್ರತಿಪಾದಿಸಿದರು.