ಚಿತ್ರದುರ್ಗ: ಹಿರಿಯೂರು ತಾಲೂಕು ಹೊಸಯಳನಾಡು ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಆನಂದ ಭಾನುವಾರ ಮನೆಯಲ್ಲಿ 25 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
*ಘಟನೆ ಹಿನ್ನೆಲೆ: ಆಲೂರು ಗ್ರಾಮದ ಆಟೋರಿಕ್ಷಾ ಚಾಲಕ ಸಿ.ಪಾಂಡುರಂಗ ತನ್ನ ಪತ್ನಿ ಕೆ.ಶಾಂತಾ ಹೆಸರಿಗೆ ಹೊಸಯಳನಾಡು ಗ್ರಾಪಂ ವ್ಯಾಪ್ತಿಯಲ್ಲಿ 2015-16ರಲ್ಲಿ ಇಂದಿರಾ ಆವಾಸ್ ಯೋಜನೆಯಡಿ ಮನೆ ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಹಣ ಮಂಜೂರಾಗಿರಲಿಲ್ಲ. ಈ ಕುರಿತು ಗ್ರಾಪಂಗೆ ಅನೇಕ ಬಾರಿ ಅಲೆದಾಡಿದರೂ ಪ್ರಯೋಜನವಾಗಿಲ್ಲ. 2023ರ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ವಿಚಾರಿಸಿದ ವೇಳೆ ಮಂಜೂರಾತಿಗಾಗಿ ಆನಂದ 35 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದೆ, ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಪ್ರಕರಣದ ಮತ್ತೊಬ್ಬ ಆರೋಪಿ ಆಲೂರು ಗ್ರಾಮದ ನರಸಿಂಹಮೂರ್ತಿ ಎಂಬಾತನ ಮೂಲಕ ಆನಂದ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ವೈ.ಎಸ್.ಶಿಲ್ಪಾ, ಆರ್.ವಸಂತ್‌ಕುಮಾರ್ ನೇತೃತ್ವದ ತಂಡದ ದಾಳಿ ನಡೆಸಿ, ಬಂಧಿಸಿದ್ದಾರೆ. ಡಿವೈಎಸ್‌ಪಿ ಎನ್.ಮೃತ್ಯುಂಜಯ ತನಿಖೆ ಮುಂದುವರಿಸಿದ್ದಾರೆ ಎಂದು ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ ತಿಳಿಸಿದ್ದಾರೆ.