ಹಾಸನ: ಸಾಲದ ಅರ್ಜಿ ವಿಲೇವಾರಿಗೆ ಲಂಚ ಪಡೆಯುತ್ತಿದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಎಚ್.ಆರ್.ಗೋಪಾಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಿಗಮದಿಂದ ದೊರೆಯುವ ಸ್ವಯಂ ಉದ್ಯೋಗಕ್ಕಾಗಿ ನೇರ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಸಕಲೇಶಪುರದ ಪತ್ರಕರ್ತ ಅಕ್ಬರ್ ಜುನೈದ್ ಅವರಿಂದ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಅಕ್ಬರ್ ಜುನೈದ್ ಅವರು ಸ್ವಯಂ ಉದ್ಯೋಗ ಪ್ರಾರಂಭಿಸಲು 20 ಲಕ್ಷರೂ. ಸಾಲಕ್ಕಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಕ್ಕೆ ಅರ್ಜಿಸಿದ್ದರು. ಅರ್ಜಿಗೆ ಅನುಮೋದನೆ ನೀಡಲು ಸತಾಯಿಸುತ್ತಿದ್ದ ನಿಗಮದ ಜಿಲ್ಲಾ ವ್ಯವಸ್ಥಾಪಕ ಗೋಪಾಲ್, ಸಾಲ ಮುಂಜುರಾತಿಗೆ ಅನುಮೋದನೆ ನೀಡಲು 1.5 ಲಕ್ಷರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಷ್ಟೊಂದು ಹಣ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಕ್ಕೆ ಕೊನೆಗೆ 75 ಸಾವಿರರೂ. ನೀಡುವುದಕ್ಕೆ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಅಕ್ಬರ್ ಜುನೈದ್, ಲಂಚದ ಮೊದಲ ಕಂತಾಗಿ 40 ಸಾವಿರರೂ. ನೀಡಲು ಸೋಮವಾರ ಬೆಳಿಗ್ಗೆ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿ ಆಗಮಿಸಿದ್ದಾರೆ. ಲಂಚ ಸ್ವೀಕಾರ ಮಾಡುವ ವೇಳೆ ಲೋಕಾಯುಕ್ತ ಇನಪೆಕ್ಟರ್‌ಗಳಾದ ಬಾಲು, ಶಿಲ್ಪ ಹಾಗು ಸಿಬ್ಬಂದಿ ದಾಳಿ ನಡೆಸಿ, ಹಣ ಹಾಗು ಗೋಪಾಲ್ ಅವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.