ಜಿಲ್ಲೆ

ಲೋಕಾಯುಕ್ತ ಬಲೆಗೆ ನಗರಸಭೆ ವಾರ್ಡ್ ಅಧಿಕಾರಿ

ಹಾಸನ: ಪೌತಿ ಖಾತೆಯೊಂದಿಗೆ ಇ-ಸ್ವತ್ತು ಮಾಡಿಕೊಡಲು ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ನಗರಸಭೆ ವಾರ್ಡ್ ಅಧಿಕಾರಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದುಬ್ಬೇಗೌಡ ಬಂಧಿತ ಆರೋಪಿ.

ನಗರದ ನಿವಾಸಿ ಅಕ್ಮಲ್ ಜಾವೀದ್ ಅವರು ತಮ್ಮ ಜಾಗದ ಪೌತಿ ಖಾತೆ ಮತ್ತು ಇ-ಸ್ವತ್ತು ಮಾಡಿಸಿಕೊಳ್ಳಲು ನಗರಸಭೆಯ ವಾರ್ಡ್ ಅಧಿಕಾರಿ ದುಬ್ಬೇಗೌಡ ಅವರ ಬಳಿ ಹೋಗಿದ್ದು, ಈ ವೇಳೆ 24 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ಅಕ್ಮಲ್ ಜಾವೀದ್ ಅವರು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಯೋಜನೆ ರೂಪಿಸಿ 24 ಸಾವಿರ ರೂ. ಹಣವನ್ನು ಮೊದಲೇ ನಿರ್ಧರಿಸಿದಂತೆ ಅಕ್ಮಲ್ ಜಾವಿದ್ ಕೈಗೆ ನೀಡಿ ಕಳುಹಿಸಿದ್ದರು. ವಾರ್ಡ್ ಅಧಿಕಾರಿ ದುಬ್ಬೇಗೌಡ ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು, ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದಾರೆ. ಬೆಳಗಿನಿಂದ ಸಂಜೆವರೆಗೂ ದುಬ್ಬೇಗೌಡರು ಸೇರಿ ಇತರ ನಗರಸಭೆ ಅಧಿಕಾರಿಗಳನ್ನು ವಿಚಾರಣೆ ನಡೆಸಿದರು.