ಮಧುಗಿರಿ: ವ್ಯಕ್ತಿಯೊಬ್ಬರಿಗೆ ಇ&-ಖಾತೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಸರ್ಕಾರಿ ನೌಕರರನ್ನು ಲೋಕಾಯುಕ್ತ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ. ತಾಲೂಕಿನ ಕೊಡ್ಲಾಪುರ ಗ್ರಾಪಂ ಪಿಡಿಒ ಪುಂಡಲೀಕ ಬೊಮ್ಮಗೊಂಡ ಮತ್ತು ಬಿಲ್ ಕಲೆಕ್ಟರ್ ಹನುಮಂತರಾಯಪ್ಪ ಅವರನ್ನು ಲೋಕಾಯುಕ್ತರು ಬಂಧಿಸಿದ್ದಾರೆ. ತಾಲೂಕಿನ ವೀರನಾಗೇನಹಳ್ಳಿಯ ಕೆ.ಎಚ್.ಆನಂದಕುಮಾರ್ ಎಂಬುವವರು ಇ-&ಖಾತೆಗೆ ಗ್ರಾಪಂಗೆ ಅರ್ಜಿ ಹಾಕಿದ್ದರು. ಸಕಾಲಕ್ಕೆ ಇ&-ಖಾತೆ ನೀಡದೆ ಸತಾಯಿಸಿದ್ದರಿಂದ ಈ ಬಗ್ಗೆ ತೆರಳಿ ವಿಚಾರಿಸಿದಾಗ ಪಿಡಿಒ ಮತ್ತು ಬಿಲ್ ಕಲೆಕ್ಟರ್ 6 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಮಂಗಳವಾರ 6 ಸಾವಿರ ರೂ. ಲಂಚದ ಸ್ವೀಕರಿಸುವಾಗ ತುಮಕೂರು ಜಿಲ್ಲಾ ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ಲಂಚದ ಹಣದ ಸಮೇತ ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ದಾಳಿಯ ತಂಡದಲ್ಲಿ ಡಿವೈಎಸ್ಪಿ ಸಂತೋಷ್, ಇನ್ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ, ರಾಜು, ಮಹಮದ್ ಸಲೀಂ, ಸುರೇಶ್ ಇದ್ದರು.