ಜಿಲ್ಲೆ

ಲೋಕಾ ಬಲೆಗೆ ಇಒ, ಗ್ರಾಪಂ ಕಾರ್ಯದರ್ಶಿ

ಕಲಬುರಗಿ: ನರೇಗಾ ಕಾಮಗಾರಿ ಕ್ರಿಯಾಯೋಜನೆ ಮಾಡಲು ಲಂಚ ಪಡೆಯುತ್ತಿದ್ದ ಯಡ್ರಾಮಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಪ್ರಭಾರಿ ಅಧಿಕಾರಿ ಮಹಾಂತೇಶ ಪುರಾಣಿಕ ಮತ್ತು ಮಳ್ಳಿ ಗ್ರಾಪಂ ಕಾರ್ಯದರ್ಶಿ ಅರವಿಂದ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದ ನಬಿಲಾಲ್ ದೌವಲ್‌ಸಾಬ್, ಪ್ರಶಾಂತ ಚವ್ಹಾಣ್ ಅವರಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ನಾಲ್ಕು ಲಕ್ಷ ರೂ. ನಾಲಾ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಿಕೊಡಲು ೫೦ ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಕಾಮಗಾರಿಯ ಮುಂಗಡ ಹಣ ೨೦ ಸಾವಿರ ರೂ. ನೀಡಬೇಕು. ನಂತರ ೩೦ ಸಾವಿರ ಕೊಡಬೇಕು ಎಂದು ಮಾತುಕತೆ ನಿಶ್ಚಯವಾಗಿತ್ತು.

ಮಂಗಳವಾರ ನಾಲ್ಕು ಗಂಟೆ ವೇಳೆ ಮುಂಗಡವಾಗಿ ನೀಡಬೇಕಿದ್ದ ೨೦ ಸಾವಿರ ರೂ.ವನ್ನು ಕಾರ್ಯನಿರ್ವಾಹಕ ಪ್ರಭಾರಿ ಅಧಿಕಾರಿ ಮಹಾಂತೇಶ ಪುರಾಣಿಕಗೆ ನೀಡಿದ್ದು, ಈ ವೇಳೆ ಗ್ರಾಪಂ ಕಾರ್ಯದರ್ಶಿ ಅರವಿಂದ ಸಹ ಇದ್ದ. ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ೨೦ ಸಾವಿರ ವಶಕ್ಕೆ ಪಡೆದು, ಬೆರಳಚ್ಚು ಪಡೆದಿದ್ದಾರೆ. ಡಿಎಸ್‌ಪಿ ಮಂಜುನಾಥ ಗಂಗಲ್, ಸರ್ಕಲ್ ಇನ್ಸ್ಸ್ಪೆಕ್ಟರ್ ಧ್ರುವತಾರೆ ಇತರೆ ಸಿಬ್ಬಂದಿ ಇದ್ದರು.