ಜಿಲ್ಲೆ

ಲೋಕಾ ದಾಳಿ 4.22 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ

ಬೆಳಗಾವಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ದೂರಿನ ಹಿನ್ನೆಲೆಯಲ್ಲಿ ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಧಾರವಾಡ ಮಲಪ್ರಭಾ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಅಶೋಕ ವಾಸನದ ಅವರಿಗೆ ಸೇರಿದ ಕಚೇರಿ, ನಿವಾಸದ ಮೇಲೆ ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಚಿನ್ನ, ಬೆಳ್ಳಿ, ನಗದು, ಜಮೀನು, ಸೈಟ್, ಮನೆ ಸೇರಿ ಇತರ 4.22 ಕೋಟಿ ರೂ. ಮೌಲ್ಯದ ಆಸ್ತಿಗಳ ಮಹತ್ವದ ದಾಖಲೆ ವಶಪಡಿಸಿಕೊಂಡು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬೆಳಗಾವಿ ರಾಮತೀರ್ಥ ನಗರ ನಿವಾಸ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ನಿವಾಸ, ಧಾರವಾಡ ನಗರದಲ್ಲಿ ನಿವಾಸ, ಕಚೇರಿ, ಕೃಷಿ ಜಮೀನು ಸೇರಿ ಎಂಟು ಕಡೆ ಏಕಕಾಲಕ್ಕೆ ದಾಳಿ ನಡೆಸಿದ ವೇಳೆ ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿ ವಿವಿಧ ಭಾಗಗಳಲ್ಲಿ 47,60,752 ರೂ.ಮೌಲ್ಯದ ಏಳು ಸೈಟ್, 2,12, 51,225 ರೂ. ಮೌಲ್ಯದ ಮೂರು ಮನೆ, 55.26 ಲಕ್ಷ ರೂ. ಮೌಲ್ಯದ 19.03 ಎಕರೆ ಕೃಷಿ ಭೂಮಿ, 96,67,198 ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ, 13.40 ಲಕ್ಷ ರೂ. ಮೌಲ್ಯದ ವಾಹನ, 1.61 ಲಕ್ಷ ರೂ. ನಗದು, 1.74 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್ ಹಾಗೂ 10 ಲಕ್ಷ ರೂ. ಮೌಲ್ಯದ ಇತರ ಆಸ್ತಿಗಳು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.