ಜಿಲ್ಲೆ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ:ರಾಯರಡ್ಡಿ

ಕೊಪ್ಪಳ: ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಿಂತರೂ ಜನ ಗೆಲ್ಲಿಸುವುದಿಲ್ಲ. ಹೀಗಾಗಿ ಸ್ಪರ್ಧಿಸುವುದಿಲ್ಲವೆಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.


ನಗರದ ಜೈನ ಭವನದಲ್ಲಿ ಶನಿವಾರ ಆತ್ಮೀಯರಿಗೆ ಹಮ್ಮಿಕೊಂಡಿದ್ದ ಔತಣಕೂಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.


ಇಂದಿನ ರಾಜ ಕಾರಣ ನನಗೆ ಒಗ್ಗುವುದಿಲ್ಲ. ಲೋಕಸಭೆಗೆ ನಾನು ಸ್ಪರ್ಧೆ ಮಾಡಿದರೆ ಜನ ನನ್ನನ್ನು ಸೋಲಿಸುತ್ತಾರೆ. ಇಂದಿನ ಚುನಾವಣೆ ವ್ಯವಸ್ಥೆ ಸರಿ ಇಲ್ಲ. ನಮ್ಮಂತವರನ್ನು ಜನ ಗೆಲ್ಲಿಸುವುದಿಲ್ಲ. ಹೀಗಾಗಿ ಚುನಾವಣೆಯಿಂದ ದೂರ ಉಳಿಯಬೇಕೆಂದುಕೊಂಡಿರುವೆ. ಈ ಹಿಂದೆ ಸಂಸದನಾಗಿದ್ದಾಗ ಸಾಕಷ್ಟು ಕೆಲಸ ಮಾಡಿರುವೆ. ಆದರೂ ಜನ ಸೋಲಿಸಿದ್ದಾರೆ. ಮುಂದಿನ ಚುನಾವಣೆಗೆ ಇನ್ನು ಸಮಯವಿದ್ದು, ಸ್ಪರ್ಧೆ ಬಗ್ಗೆ ಈಗಲೇ ಹೇಳಲಾರೆ ಎಂದರು.


ಗುತ್ತಿಗೆದಾರರ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ವಿರೋಧ ಪಕ್ಷದಲ್ಲಿದ್ದಾಗ 40 ಪರ್ಸೆಂಟ್ ಸರ್ಕಾರವೆಂದು ಆರೋಪ ಮಾಡಿದ್ದೆವು. ಈಗ ಶೇ.15ರಷ್ಟು ಕಮಿಷನ್ ಆರೋಪ ಕೇಳಿ ಬರುತ್ತಿದೆ. ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಸಿಎಂ ಸಿದ್ದರಾಮಯ್ಯ ಭ್ರಷ್ಟಚಾರ ತೊಲಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.


ಚುನಾವಣೆ ಸಮಯದಲ್ಲಿ ನನಗಾಗಿ ಕೆಲಸ ಮಾಡಿದ ಕಾರ್ಯಕರ್ತರು, ಚುನಾವಣೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು, ಆತ್ಮೀಯರಿಗೆ ಧನ್ಯವಾದ ತಿಳಿಸಲು ಔತಣಕೂಟ ಏರ್ಪಡಿಸಿರುವೆ. ಯಾವುದೇ ರಾಜಕೀಯ ಕಾರಣಕ್ಕಾಗಿ ಅಲ್ಲ. ಈ ಹಿಂದೆಯೂ ಹಲವು ಬಾರಿ ಇಂಥ ಕಾರ್ಯಕ್ರಮ ಮಾಡಿರುವೆ. ಇದರಲ್ಲಿ ವಿಶೇಷವೇನಿಲ್ಲವೆಂದು ಸಮರ್ಥಿಸಿಕೊಂಡರು.