ಜಿಲ್ಲೆ

ಲೋಕಸಭೆ ಚುನಾವಣೆಯಲ್ಲಿ ಶ್ರಮ ವಹಿಸಿ ಕೆಲಸ ಮಾಡಲು ಸಚಿವ ಕೃಷ್ಣ ಬೈರೇಗೌಡ ಸಲಹೆ

ಹಾಸನ: ಈ ಬಾರಿ ನೂರಕ್ಕೆ ನೂರರಷ್ಟು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ನಮಗೆ ಒಳ್ಳೆಯ ಅವಕಾಶಗಳಿವೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ತಾವೆಲ್ಲರೂ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸೋತಿರುವಂತಹ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸ ಕಾಮಗಾರಿಗಳ ಬಗ್ಗೆ ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಂಬಂಧಪಟ್ಟ ಇಲಾಖೆಗೆ ಮನವಿ ಪತ್ರ ನೀಡಿ. ಆ ಕೆಲಸಗಳನ್ನು ಶೀಘ್ರದಲ್ಲಿ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗಬೇಕಿದ್ದರೆ ಅದನ್ನು ಮಾಡಿಕೊಡುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿದರು.
ಜಿಲ್ಲಾ ಮುಖಂಡರಿಗೆ ಯಾವುದೇ ರೀತಿ ಸಹಕಾರ ಬೇಕಿದ್ದರೂ ಅದನ್ನು ನೀಡಲು ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಹಿಂದೆ ಆಗಿರುವಂತಹ ತಪ್ಪುಗಳನ್ನ ಎಲ್ಲರೂ ಮರೆತು ಮುಂಬರುವ ಲೋಕಸಭಾ ಚುನಾವಣೆ ಕಡೆ ಹೆಚ್ಚು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸುವ ಅವಕಾಶಗಳಿದ್ದವು. ಆದರೆ, ಕೆಲವು ಸಣ್ಣಪುಟ್ಟ ತಪ್ಪುಗಳಿಂದಾಗಿ ಇನ್ನೂ ಮೂರು-ನಾಲ್ಕು ಸ್ಥಾನಗಳು ಕೈ ತಪ್ಪಿದವು. ಅಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ನಾವು ಬಲಾಢ್ಯರ ವಿರುದ್ಧ ಹೋರಾಟ ಮಾಡಬೇಕಾಗಿದೆ. ಆ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಆರ್ಥಿಕವಾಗಿ ಸದೃಢರಾಗಬೇಕು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಎಲ್ಲ ಅವಕಾಶಗಳಿದ್ದು ಈ ನಿಟ್ಟಿನಲ್ಲಿ ಸೋತಿರುವಂತಹ ಅಭ್ಯರ್ಥಿಗಳು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಅಗತ್ಯ ನೆರವು ಮತ್ತು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಮಂತ್ರಿಗಳು ಇದಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆಯಂತಹ ಬಲಿಷ್ಠ ಖಾತೆಯನ್ನು ಕೃಷ್ಣ ಬೈರೇಗೌಡರಿಗೆ ವಯಸ್ಸು ಮತ್ತು ಇನ್ನಿತರ ಆಧಾರದ ಮೇಲೆ ನೀಡಿಲ್ಲ. ಕಿರಿಯರಾಗಿದ್ದರೂ ಕೂಡ ಅವರಿಗೆ ಕೆಲಸ ಮಾಡುವ ಬದ್ಧತೆ ಇರುವುದರಿಂದ ಮುಖ್ಯಮಂತ್ರಿಗಳು ಆ ಖಾತೆಯನ್ನು ಇವರಿಗೆ ನೀಡಿದ್ದಾರೆ. ಕಂದಾಯ ಖಾತೆಯನ್ನು ವಹಿಸಿಕೊಂಡ ಮೇಲೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತರುತ್ತಿದ್ದಾರೆ ಎಂದು ಸಚಿವರಿಗೆ ಬಹುಪರಾಕ್ ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಾಜಿ ಎಂ.ಎ. ಗೋಪಾಲಸ್ವಾಮಿ, ಮುಖಂಡರಾದ ಶ್ರೇಯಸ್ ಪಟೇಲ್, ಮುರಳಿ ಮೋಹನ್, ಬನವಾಸೆ ರಂಗಸ್ವಾಮಿ, ದೇವರಾಜೇಗೌಡ, ತಾರಾ ಚಂದನ್ ಸೇರಿದಂತೆ ಇನ್ನಿತರರು ಹಾಜರಿದ್ದರು.