ಮೈಸೂರು: ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್ ಹಾಗೂ ಜನರ ಆಕ್ರೋಶ ಹೇಗೆ ಆಸ್ಫೋಟಗೊಳ್ಳುತ್ತದೆ ಎನ್ನುವುದನ್ನು ಕಾದುನೋಡಿ ಎಂದು ಮಾಜಿ ಸಚಿವ ಸಿ.ಟಿ.ರವಿ ಭವಿಷ್ಯ ನುಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರುವಾಗಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕೆಆರ್‌ಎಸ್ ಭರ್ತಿಯಾಗುತ್ತಿತ್ತು. ಆದರೆ ಈಗ ಖಾಲಿ ಇದ್ದು, ರೈತರಿಗೆ ನೀರಿಲ್ಲದಂತಾಗಿದೆ. ಪವರ್ ಕಟ್, ಲೋಡ್ ಶೆಡ್ಡಿಂಗ್ ಶುರುವಾಗಿದೆ. ಶೂನ್ಯ ಬಿಲ್ ಅಂತಾರೆ, ಕರೆಂಟೇ ಇಲ್ಲದ ಮೇಲೆ ಶೂನ್ಯ ಬಿಲ್ ಬರುತ್ತೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಲೇವಡಿ ಮಾಡಿದರು.
ಈ ಸರ್ಕಾರ ಬಂದ ನಂತರ ಭವಿಷ್ಯದ ಚಿಂತೆ ಕಾಡುತ್ತಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಸಂಬಳ ಕೊಡಲಾಗುತ್ತಿಲ್ಲ, ಅಭಿವೃದ್ಧಿ, ಉದ್ಯೋಗ ಸೃಷ್ಟಿ ಇಲ್ಲ. ಕೇವಲ ವೋಟಿಗಾಗಿ 5 ಗ್ಯಾರಂಟಿಗಳ ಹಿಂದೆ ಬಿದ್ದಿದ್ದಾರೆ. ಇದರ ಪರಿಣಾಮ ರಾಜ್ಯದಲ್ಲಿ ಬೆಲೆ ಏರಿಕೆ ಎಲ್ಲ ದಾಖಲೆ ಮೀರಿಸುವ ಸ್ಥಿತಿಗೆ ಬರಬಹುದು ಎಂದು ಎಚ್ಚರಿಸಿದರು.
ಭವಿಷ್ಯದ ಮೈಸೂರು ಯೋಜನೆ ಏನು ಅಂತ ಸಿದ್ದರಾಮಯ್ಯ ಅವರನ್ನು ಕೇಳಿದರೆ, ಅವರ ಬಳಿ ಈಗ ಉತ್ತರ ಇಲ್ಲ. ಇನ್ನು ಮೂರು ತಿಂಗಳಲ್ಲಿ ಪಾರ್ಲಿಮೆಂಟ್ ಚುನಾವಣೆ ಇದೆ. ಇದಾದ ಬಳಿಕ ಅಸಹನೆ, ಆಕ್ರೋಶ ಯಾವ ರೀತಿ ಹೊರ ಹಾಕುತ್ತಾರೆ ಎಂಬುದನ್ನು ನೀವೇ ನೋಡುತ್ತಿರಿ. ರಾಜ್ಯದ ಭವಿಷ್ಯದ ಚಿಂತೆ ಕಾಡುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.