ಚಿತ್ರದುರ್ಗ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಬಿಜೆಪಿಯನ್ನು ಸೋಲಿಸುವುದು ಗ್ಯಾರಂಟಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭವಿಷ್ಯ ನುಡಿದರು.
ಹೊರವಲಯದ ಭೋವಿ ಗುರುಪೀಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವ, ಪಟ್ಟಾಭಿಷೇಕದ 14ನೇ ವಾರ್ಷಿಕೋತ್ಸವ, ರಾಷ್ಟ್ರೀಯ ಭೋವಿ ಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರದಲ್ಲಿ 2014 ರಿಂದ ಈವರೆಗೂ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ವಿದೇಶದಿಂದ ಕಪ್ಪು ಹಣ ತರುವುದಾಗಲಿ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಲಿ, ದೇಶದ ಬೆನ್ನೆಲುಬಾದ ರೈತರ, ಜನಸಾಮಾನ್ಯರ ಆದಾಯ ದ್ವಿಗುಣಗೊಳಿಸುವುದಾಗಲಿ ಮಾಡಿಲ್ಲ. ಆ ಪಕ್ಷದ ನಾಯಕರು ಸುಳ್ಳು ಆಶ್ವಾಸನೆಯ ಹೇಳಿಕೆ ನೀಡುತ್ತ ಜನರಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಭಾರತದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅರಾಜಕತೆ ಸೃಷ್ಟಿಗೆ ಬಿಜೆಪಿ ಕಾರಣವಾಗಿದೆ. ಸತತ 9 ವರ್ಷ ದೇಶವನ್ನು ಅಭಿವೃದ್ಧಿ ಪಡಿಸುವ ಬದಲು ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲೂ 4 ವರ್ಷ ಬಿಜೆಪಿ ದುರಾಡಳಿತದಿಂದ ಜನ ಬೇಸತ್ತು ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷವನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು, ಕೊಟ್ಟ ಭರವಸೆಯಂತೆ 5 ಗ್ಯಾರಂಟಿ ಜಾರಿಯಾಗಲಿವೆ. ಈಗಾಗಲೇ 3 ಗ್ಯಾರಂಟಿಗಳು ಜಾರಿಯಾಗಿವೆ. ಮುಂದಿನ ತಿಂಗಳು ಗೃಹಲಕ್ಷ್ಮಿ ಕೂಡ ಅನುಷ್ಠಾನಗೊಳ್ಳಲಿದೆ ಎಂದು ಆಶ್ವಾಸನೆ ನೀಡಿದರು.
ದೇಶದ ರೈತರ ಕಲ್ಯಾಣ, ಬಡವರ, ದಲಿತರ, ಅಲ್ಪಸಂಖ್ಯಾತರ, ಮಹಿಳೆಯರ ಸಬಲೀಕರಣ ಆಗಬೇಕಾದರೆ, ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಬಿಜೆಪಿ ಮತ್ತು ಜೆಡಿಎಸ್‌ನವರು ಯಾರ ಕಲ್ಯಾಣ ಮಾಡಿದ್ದಾರೆ ಎಂದು ಛೇಡಿಸಿದರು.
ಬಾಯಿ ಚಪಲಕ್ಕೆ ಆರೋಪ
ರಾಜ್ಯದಲ್ಲಿ ನುಡಿದಂತೆ ನಡೆಯುವ ಪಕ್ಷವನ್ನು ಜನ ಬೆಂಬಲಿಸಿದ್ದಾರೆ. ಅದನ್ನು ಖಂಡಿತ ಉಳಿಸಿಕೊಳ್ಳಲಿದ್ದೇವೆ. ಇದನ್ನು ಸಹಿಸದ ವಿರೋಧ ಪಕ್ಷಗಳ ನಾಯಕರು ಬಾಯಿ ಚಪಲಕ್ಕೆ ಆರೋಪ ಮಾಡುತ್ತಿದ್ದಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ರೈತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಾಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದು ತಂಗಡಗಿ ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಏನೆಲ್ಲ ಕಾರ್ಯಕ್ರಮ ರೂಪಿಸಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಆಡಳಿತ ಪಕ್ಷವನ್ನು ಟೀಕಿಸಲು ಯಾವ ವಿಷಯಗಳಿಲ್ಲದ ಕಾರಣ ಸುಖಾಸುಮ್ಮನೆ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.