ಜಿಲ್ಲೆ

ಲೋಕಸಭಾ ಚುನಾವಣೆ: ಎಂಸಿಎಂಸಿ ಸಭೆ

Hassan - Mohan Kanthur

ಹಾಸನ: ಲೋಕಸಭಾ ಚುನಾವಣೆ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿ(ಎಂಸಿಎಂಸಿ) ಸಭೆಯು ಶನಿವಾರ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಘೋಷಣೆಯಾದಂದಿನಿಂದ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ, ಕಾರ್ಯಕ್ರಮಗಳನ್ನು ಪರಿಶೀಲಿಸಲು ಪೂರ್ಣಪ್ರಮಾಣ ಎಂಸಿಎಂಸಿ ತಂಡವು ವಾರ್ತಾ ಇಲಾಖೆ ಸಭಾಂಗಣದಲ್ಲಿ ಕಾರ್ಯಾಚರಿಸುತ್ತಿದೆ. ಟಿವಿ ಸುದ್ದಿ ವಾಹಿನಿ ಮತ್ತು ಸ್ಥಳೀಯ ಕೇಬಲ್ ಟಿವಿ ಕಾರ್ಯಕ್ರಮಗಳನ್ನು ನಿರಂತರವಾಗಿ ವೀಕ್ಷಿಸಲಾಗುತ್ತಿದೆ. ಟಿವಿ, ಸಾಮಾಜಿಕ ಜಾಲತಾಣ, ಆನ್‌ಲೈನ್ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಯಾವುದೇ ಚುನಾವಣಾ ಜಾಹೀರಾತುಗಳಿಗೆ ಎಂಸಿಎಂಸಿ ಸಮಿತಿಯಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದರು. ಇದಲ್ಲದೇ, ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಪಾವತಿ ಸುದ್ದಿಗಳ ಮೇಲೆ ನಿಗಾ ಇಡಲಾಗಿದೆ ಎಂದರು.
ಸಮಿತಿ ಕಾರ್ಯದರ್ಶಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಸಮಿತಿ ಸದಸ್ಯರಾದ ಆರ್. ಮೋಹನ್‌ಕೃಷ್ಣ(ದೂರದರ್ಶನ), ವಿಜಯ ಅಂಗಡಿ(ಆಕಾಶವಾಣಿ), ಎಚ್.ಎಸ್. ರವಿ, ಪೊಲೀಸ್ ನಿರೀಕ್ಷಕ ಮಧು ಟಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.