ಬೀದರ್: ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೀದರ್ ನಗರಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಏ.27ರಂದು ಲೋಕಲ್ ಸಮರ ನಡೆಯಲಿದೆ.
ರಾಜ್ಯ ಚುನಾವಣಾ ಆಯೋಗ ಸೋಮವಾರ ಚುನಾವಣೆ ಘೋಷಣೆ ಮಾಡಿದೆ. ಏ.8ರಂದು ಅಧಿಸೂಚನೆ ಜಾರಿಯಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. 15 ನಾಮಪತ್ರ ಸಲ್ಲಿಕೆಗೆ ಕೊನೇ ದಿನ. 16ರಂದು ನಾಮಪತ್ರ ಪರಿಶೀಲನೆ, 19ಕ್ಕೆ ಉಮೇದುವಾರಿಕೆ ವಾಪಸ್, 27ರಂದು ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದಲ್ಲಿ 29ಕ್ಕೆ ನಡೆಯಲಿದೆ. 30ರಂದು ಮತ ಎಣಿಕೆ ಇದೆ.
2013ರ ಫೆಬ್ರವರಿಯಲ್ಲಿ ಬೀದರ್ ನಗರಸಭೆಗೆ ಚುನಾವಣೆ ನಡೆದಿತ್ತು. ಅವಧಿ ಪೂರ್ಣಗೊಂಡ ನಂತರ ನಿಗದಿಯಂತೆ 2018ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಕೆಲ ವಾಡ್೯ಗಳ ಮೀಸಲಾತಿ ತಕರಾರು ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಿದ ಹಿನ್ನೆಲೆಯಲ್ಲಿ ಚುನಾವಣೆ ವಿಳಂಬವಾಗಿದೆ. ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥವಾದ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗೆ ವಾಡ್೯ ಮೀಸಲು ನಿಗದಿಪಡಿಸಿತ್ತು. ಇದೀಗ ಆಯೋಗ ಚುನಾವಣೆ ಘೋಷಣೆ ಮಾಡಿದೆ.
ಬೀದರ್ ನಗರಸಭೆ 35 ಸ್ಥಾನಗಳನ್ನು ಹೊಂದಿದೆ. ಮೀಸಲು ನಿಗದಿಯಾದ ಬೆನ್ನಲ್ಲೇ ಲೋಕಲ್ ಸಮರದ ಆಕಾಂಕ್ಷಿಗಳ ಚಟುವಟಿಕೆ ಬಿರುಸುಗೊಂಡಿವೆ. ಆಯಾ ವಾಡ್೯ನಿಂದ ಸ್ಪರ್ಧಿಸಬಯಸುವ ಆಕಾಂಕ್ಷಿಗಳು ಟಿಕೆಟ್ ಗಾಗಿ ತಮ್ಮ ನಾಯಕರ ದುಂಬಾಲು ಬಿದ್ದಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಗರಾಡಳಿತ ಕೈವಶಕ್ಕೆ ಪ್ರಯತ್ನಿಸುತ್ತಿವೆ. ಎಂಐಎಂ ಸಹ ಈ ಸಲ ಪ್ರಬಲ ಪೈಪೋಟಿಯೊಡ್ಡುವ ನಿರೀಕ್ಷೆಗಳಿವೆ. ಹೀಗಾಗಿ ಈಗಿನಿಂದಲೇ ಕದನ ಕುತೂಹಲ ಹೆಚ್ಚಿಸಿದೆ.
ಏ.17ರಂದು ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ನಡೆಯಲಿದೆ. ಇದಾದ 10 ದಿನದಲ್ಲೇ ನಗರಸಭೆಗೆ ಚುನಾವಣೆ ಇದೆ. ಹೀಗಾಗಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಈಗ ಉಪ ಸಮರದ ಜತೆಗೆ ನಗರಸಭೆ ಚುನಾವಣೆಯತ್ತಲೂ ಚಿತ್ತ ಹರಿಸಬೇಕಿದೆ.
ಹೀಗಿದೆ ವೇಳಾಪಟ್ಟಿ…
ಕಳೆದ ಬಾರಿ ಸಿಗದ ಬಹುಮತ
2013ರ ಫೆಬ್ರವರಿಯಲ್ಲಿ ನಡೆದಿದ್ದ ಬೀದರ್ ನಗರಸಭೆ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. 35 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 11, ಜೆಡಿಎಸ್ 10, ಬಿಜೆಪಿ 5, ಕೆಜೆಪಿ 5, ಪಕ್ಷೇತರ ಒಬ್ಬ ಹಾಗೂ 3 ಸ್ಥಾನದಲ್ಲಿ ಎಂಐಎಂ ಅಭ್ಯರ್ಥಿಗಳು ಜಯಿಸಿದ್ದರು. ಬಹುಮತ ಇರದ ಕಾರಣ ಮೈತ್ರಿಯಲ್ಲೇ ಐದು ವರ್ಷ ಆಡಳಿತ ನಡೆದಿತ್ತು. ಈ ಸಲ ಯಾರಿಗಾದರೂ ಸ್ಪಷ್ಟ ಬಹುಮತದಿಂದ ಗದ್ದುಗೆ ಸಿಗಬಹುದಾ? ಅಥವಾ ಹಿಂದಿನಂತೆ ಅತಂತ್ರ ಪರಿಸ್ಥಿತಿ ಗತಿಯೇ ಕಾದು ನೋಡಬೇಕು.
ವಾಡ್೯ವಾರು ಮೀಸಲಾತಿ ಇಂತಿದೆ
ವಾಡ್೯ 1: ಸಾಮಾನ್ಯ, ವಾಡ್೯ 2: ಹಿಂದುಳಿದ ವರ್ಗ (ಎ) ಮಹಿಳೆ, ವಾಡ್೯ 3: ಹಿಂದುಳಿದ ವರ್ಗ (ಬಿ) ಮಹಿಳೆ, ವಾಡ್೯ 4: ಸಾಮಾನ್ಯ, ವಾಡ್೯ 5: ಹಿಂದುಳಿದ ವರ್ಗ (ಎ), ವಾಡ್೯ 6: ಸಾಮಾನ್ಯ ಮಹಿಳೆ, ವಾಡ್೯ 7: ಹಿಂದುಳಿದ ವರ್ಗ (ಎ) ಮಹಿಳೆ, ವಾಡ್೯ 8: ಹಿಂದುಳಿದ ವರ್ಗ (ಎ) ಮಹಿಳೆ, ವಾಡ್೯ 9: ಸಾಮಾನ್ಯ ಮಹಿಳೆ, ವಾಡ್೯ 10: ಪರಿಶಿಷ್ಟ ಜಾತಿ, ವಾಡ್೯ 11: ಪರಿಶಿಷ್ಟ ಜಾತಿ ಮಹಿಳೆ, ವಾಡ್೯ 12: ಸಾಮಾನ್ಯ, ವಾಡ್೯ 13: ಪರಿಶಿಷ್ಟ ಜಾತಿ, ವಾಡ್೯ 14: ಹಿಂದುಳಿದ ವರ್ಗ (ಎ), ವಾಡ್೯ 15: ಸಾಮಾನ್ಯ ಮಹಿಳೆ, ವಾಡ್೯ 16: ಸಾಮಾನ್ಯ, ವಾಡ್೯ 17: ಸಾಮಾನ್ಯ, ವಾಡ್೯ 18: ಪರಿಶಿಷ್ಟ ಜಾತಿ ಮಹಿಳೆ, ವಾಡ್೯ 19: ಸಾಮಾನ್ಯ, ವಾಡ್೯ 20: ಹಿಂದುಳಿದ ವರ್ಗ (ಎ), ವಾಡ್೯ 21: ಸಾಮಾನ್ಯ ಮಹಿಳೆ, ವಾಡ್೯ 22: ಹಿಂದುಳಿದ ವರ್ಗ (ಎ) ಮಹಿಳೆ, ವಾಡ್೯ 23: ಪರಿಶಿಷ್ಟ ಪಂಗಡ ಮಹಿಳೆ, ವಾಡ್೯ 24: ಸಾಮಾನ್ಯ, ವಾಡ್೯ 25: ಹಿಂದುಳಿದ ವರ್ಗ (ಬಿ), ವಾಡ್೯ 26: ಸಾಮಾನ್ಯ ಮಹಿಳೆ, ವಾಡ್೯ 27: ಪರಿಶಿಷ್ಟ ಜಾತಿ, ವಾಡ್೯ 28: ಹಿಂದುಳಿದ ವರ್ಗ (ಎ), ವಾಡ್೯ 29: ಸಾಮಾನ್ಯ, ವಾಡ್೯ 30: ಸಾಮಾನ್ಯ ಮಹಿಳೆ, ವಾಡ್೯ 31: ಪರಿಶಿಷ್ಟ ಪಂಗಡ, ವಾಡ್೯ 32: ಸಾಮಾನ್ಯ ಮಹಿಳೆ, ವಾಡ್೯ 33: ಸಾಮಾನ್ಯ ಮಹಿಳೆ, ವಾಡ್೯ 34: ಸಾಮಾನ್ಯ ಮಹಿಳೆ, ವಾಡ್೯ 35: ಸಾಮಾನ್ಯ.