ಬಸವಕಲ್ಯಾಣ: ಲೋಕ ವಿಮರ್ಶೆ ಹಾಗೂ ಜೀವನ ಶೋಧ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರಹದ ತಾತ್ವಿಕತೆಯಾಗಿದೆ. ಸಮಕಾಲೀನ ಸ್ಪಂದನೆಯ ಗುಣ ಅವರ ಬರಹಕ್ಕಿದೆ ಎಂದು ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೀದರ್‌ನ ಚಕೋರ ಸಾಹಿತ್ಯ ವಿಚಾರ ವೇದಿಕೆ ಸಹಯೋಗದಡಿ ಎಸ್‌ಎಸ್‌ಕೆ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಹೊಸ ವಿಚಾರಗಳು ಕುರಿತ ಕಾಲೇಜಿನಲ್ಲಿ ದಲ್ಲಿ ಮಾತನಾಡಿದ ಅವರು, ತೇಜಸ್ವಿಯವರ ಬರಹದಲ್ಲಿ ಸಮಾಜ, ರಾಜಕಾರಣ, ಪರಿಸರ, ಆರ್ಥಿಕತೆ ಸೇರಿ ಲೋಕ ವಿಮರ್ಶೆಯ ಮಾದರಿ ಕಾಣಬಹುದು ಎಂದರು.
ಪರಿಸರ ಪ್ರಜ್ಞೆ ರೂಪಿಸುವುದರ ಜತೆಗೆ ಲೋಕದ ಸಂಕೀರ್ಣತೆ ಕಂಡುಕೊಳ್ಳಲು ತೇಜಸ್ವಿ ಬರಹ ದಾರಿಯಾಗಿದೆ. ಜಾಗತಿಕ ಅರ್ಥ ವ್ಯವಸ್ಥೆ, ರೈತರ ಕಷ್ಟ, ರಾಜಕಾರಣಿಗಳ ಬೇಜವಾಬ್ದಾರಿ, ಕನ್ನಡಕ್ಕೆ ತೆರೆದುಕೊಳ್ಳಬೇಕಾದ ತಂತ್ರಜ್ಞಾನಗಳ ಬಗ್ಗೆ ಗಾಢವಾದ ಚಿಂತನೆ ಮಾಡಿದ್ದಾರೆ. ಮಾರುವವರು ಮತ್ತು ಗ್ರಾಹಕರ ಸಂಸ್ಕೃತಿಯಾಗಿ ಮಾರ್ಪಟ್ಟ ವ್ಯಕ್ತಿಯ ಜೀವನ ವಿಧಾನ ಕುರಿತು ಅವರ ಹೊಸ ವಿಚಾರಗಳು ಕೃತಿಯಲ್ಲಿ ಚರ್ಚಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಚಾರಿಕತೆ, ವಿವೇಚನೆ ಮೂಡಿಸುವಂಥ ಕೆಲಸ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಸಾಹಿತ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಈ ಸಮಾರಂಭದ ಆಶಯ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಮಾತನಾಡಿ, ಪ್ರತಿಯೊಂದು ಕೆಲಸದಲ್ಲಿ ಶ್ರದ್ಧೆ ಅವಶ್ಯಕ. ಓದುವುದು ತಪಸ್ಸಿನಂತೆ ಪರಿಗಣಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಕ್ಯುಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್, ಭಾಲ್ಕಿಯ ನಿವೃತ್ತ ಗ್ರಂಥಪಾಲಕ ಉಮೇಶ ಮಾಸಿಮಾಡೆ, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಯೋಜಕಿ ಡಾ.ಮಕ್ತುಂಬಿ ಎಂ. ಮಾತನಾಡಿದರು.
ಡಾ.ಸುರೇಶ ಎಚ್.ಆರ್., ಕಲ್ಯಾಣಪ್ಪ ನಾವದಗಿ, ಪತ್ರಕರ್ತ ನಾಗಪ್ಪ ನಿಣ್ಣೆ, ಸೂರ್ಯಕಾಂತ ನಾಸೆ, ಭಾರತಿ ಮಠ, ಶಿಲ್ಪಾ ಬಿರಾದಾರ, ಪೂಜಾ ಉಪಸ್ಥಿತರಿದ್ದರು. ವಿಠೋಬಾ ಡೊಣ್ಣೇಗೌಡರ್ ಸ್ವಾಗತಿಸಿದರು. ಡಾ.ರಮೇಶ ಕೆ.ಬಿ. ವಂದಿಸಿದರು. ಭೀಮಾಶಂಕರ ಪೂಜಾರಿ ನಿರೂಪಣೆ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಶಬನಮ್ ಹಾಗೂ ಜಯಶ್ರೀ ಸ್ವಾಮಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದ್ದು ನೋವಿನ ಸಂಗತಿ. ಓದಿನಿಂದಲೇ ಜ್ಞಾನದ ವಿಸ್ತಾರ ಸಾಧ್ಯ. ಓದಿನ ಹಸಿವಿನಿಂದಲೇ ತಿಳಿವಳಿಕೆ ಹೆಚ್ಚಾಗುತ್ತದೆ. ಹೀಗಾಗಿ ಓದುವ ಹವ್ಯಾಸ ಎಲ್ಲರೂ ಬೆಳೆಸಿಕೊಳ್ಳಬೇಕು. ಪಕ್ಷಿಲೋಕ ಬಗ್ಗೆ ಹೆಚ್ಚು ನಿರ್ದಿಷ್ಟ ಮತ್ತು ವೈಜ್ಞಾನಿಕವಾಗಿ ತೇಜಸ್ವಿ ಬರೆದಿದ್ದಾರೆ.
| ಡಾ.ಶಿವಕುಮಾರ ಪಾಟೀಲ್
ಐಕ್ಯುಎಸಿ ಸಂಯೋಜಕ