ಜಿಲ್ಲೆ

ಲೋಕ, ವಿಧಾನಸಭೆಯಲ್ಲೂ ಮಹಿಳೆಯರಿಗೆ ಮೀಸಲಾತಿ ಜಾರಿಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಷ್ಪಅಮರನಾಥ್ ಆಗ್ರಹ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಪತ್ರ ಬರೆಯುವುದಾಗಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.
ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ನಿಂದ ಕಾಂಗ್ರೆಸ್ ಕಚೇರಿ ಇಂದಿರಾ ಕಾಂಗ್ರೆಸ್ ಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪ್ರಜಾಪ್ರಭುತ್ವ ದಿನ ಮತ್ತು ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ದೊರೆತಿದೆ. ಅಂತೆಯೆ, ವಿಧಾನಸಭೆ, ಲೋಕಸಭೆಯಲ್ಲೂ ರಾಜಕೀಯ ಮೀಸಲಾತಿ ಜಾರಿಗೊಳಿಸುವಂತೆ ಕೂಗು, ಹೋರಾಟ ನಿರಂತರವಾಗಿ ನಡೆಯುತ್ತಿದೆ. ಆದರೆ ಮಹಿಳೆಯರ ಮೀಸಲಾತಿ ಜಾರಿ ಮರೀಚಿಕೆಯಾಗಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಬಹುಮತದೊಂದಿಗೆ ಸರ್ಕಾರ ನಡೆಸುತ್ತಿದೆ. ಮಹಿಳೆಯರ ಬಗ್ಗೆ ಕಾಳಜಿ, ಮೀಸಲಾತಿ ನೀಡಬೇಕು ಎನ್ನುವ ಉದ್ದೇಶ ಇದ್ದರೆ ಜಾರಿ ಮಾಡುವುದು ಕಷ್ಟವಲ್ಲ. ಆದರೆ ಮೀಸಲಾತಿ ನೀಡುವುದಾಗಿ ಹೇಳುತ್ತಲೇ ನಿಧಾನಗತಿ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಸಮಾನತೆ ಸಿಕ್ಕಿದರೆ ಮಾತ್ರ ಮಹಿಳೆಯರು ಮುಂದುವರಿಯಲು ಸಾಧ್ಯ. ಎಲ್ಲ ಪಕ್ಷಗಳ ನಾಯಕರು ಮಹಿಳಾ ಮೀಸಲಾತಿ ಜಾರಿಗೆ ಸಹಮತ ವ್ಯಕ್ತಪಡಿಸಬೇಕು. ಈ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಕಾಂಗ್ರೆಸ್ ಸ್ಥಾಪನೆಯಾಗಿ 4 ದಶಕ ಪೂರೈಸಿದೆ. ಸುಚೇತಾ ಕೃಪಲಾನಿ ಮೊದಲ ಅಧ್ಯಕ್ಷರಾಗಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಹಿಳಾ ಕಾಂಗ್ರೆಸ್‌ಗೆ ಒತ್ತು ಕೊಟ್ಟಿದ್ದರು. ಇಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ದೇಶದ ಮಹಿಳೆಯರ ಕಷ್ಟಗಳಿಗೆ ದನಿಯಾಗಿದೆ ಎಂದು ತಿಳಿಸಿದರು.
ಮಹಿಳಾ ಕಾಂಗ್ರೆಸ್ ಚಳವಳಿ, ಹೋರಾಟದ ಸಂಕೇತವಾಗಿದೆ. ಮಹಿಳೆಯರಿಗೆ ಶಿಕ್ಷಣ, ಹಕ್ಕುಗಳನ್ನು ಕೊಡಿಸಲು ಬದ್ಧವಾಗಿದೆ. ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಹೋರಾಡುವ ಸಂಕಲ್ಪ ತೊಟ್ಟಿದೆ ಎಂದು ಹೇಳಿದರು.
ಸಂವಿಧಾನ ಪೀಠಿಕೆ ಓದಿದ ಬಳಿಕ ಎಲ್ಲರಿಗೂ ಸಿಹಿ ವಿತರಿಸಲಾಯಿತು. ನಗರ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮಹಿಳಾ ಘಟಕದ ನಗರಾಧ್ಯಕ್ಷ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಜಿ.ಪಂ. ಮಾಜಿ ಸದಸ್ಯೆ ಸುಧಾ ಮಹದೇವಯ್ಯ ಇತರರು ಇದ್ದರು.