ಜಿಲ್ಲೆ

ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ

ನಾಗಮಂಗಲ: ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾದ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳಿದ್ದು, ಎರಡೂ ಕಡೆಯ ಕಕ್ಷಿದಾರರು ಪರಸ್ಪರ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದರಿಂದ ಯಾರಿಗೂ ಸೋಲಾಗದೆ ಇಬ್ಬರಿಗೂ ಜಯ ಸಿಕ್ಕಂತಾಗುತ್ತದೆ ಎಂದು ಸಿವಿಲ್ ನ್ಯಾಯಾಧೀಶ ಬಿ.ಗಿರಿಗೌಡ ತಿಳಿಸಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಸೆ.9ರಂದು ನಡೆಯುವ ಲೋಕ ಅದಾಲತ್ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸೆ.9ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಈಗಾಗಲೇ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ರಾಜಿಯಾಗಬಹುದಾದ ಪ್ರಕರಣಗಳನ್ನು ಗುರುತಿಸಿ ಎರಡೂ ಕಡೆಯ ಕಕ್ಷಿದಾರರಿಗೆ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದರು.
ಲೋಕ ಅದಾಲತ್ ಯಶಸ್ಸಿಗೆ ವಕೀಲರ ಸಹಕಾರ ಅಗತ್ಯ. ಇಬ್ಬರೂ ಕಕ್ಷಿದಾರರು ಗೆಲುವು ಸಾಧಿಸಬೇಕೆಂದರೆ ಲೋಕ ಅದಾಲತ್‌ನ ರಾಜಿ ಸಂಧಾನದಿಂದ ಮಾತ್ರ ಸಾಧ್ಯ. ಕಾನೂನು ಬದ್ಧವಾಗಿ ನ್ಯಾಯಾಲಯದಲ್ಲಿಯೇ ರಾಜಿ ಸಂಧಾನ ನಡೆಸಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗುವುದು. ಲೋಕ ಅದಾಲತ್‌ನಿಂದ ದ್ವೇಷ, ಅಸೂಯೆ, ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುವುದನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ವಕೀಲರು ಕಕ್ಷಿದಾರರಿಗೆ ಲೋಕ ಅದಾಲತ್ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಅದಾಲತ್ ಯಶಸ್ವಿಗೆ ಸಹಕರಿಸಬೇಕು ಎಂದು ಹೇಳಿದರು.
ನಾಲ್ಕು ನ್ಯಾಯಾಲಯಗಳಿಂದ ಒಟ್ಟು 9114 ಪ್ರಕರಣಗಳಿವೆ. ಅವುಗಳಲ್ಲಿ ಇತ್ಯರ್ಥಪಡಿಸಬಹುದಾದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 225 ಪ್ರಕರಣಗಳು, ಅಪರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 228 ಪ್ರಕರಣಗಳು, ಸಿವಿಲ್ ನ್ಯಾಯಾಲಯದಲ್ಲಿ 263 ಪ್ರಕರಣಗಳು ಮತ್ತು ಅಪರ ಸಿವಿಲ್ ನ್ಯಾಯಾಲಯದಲ್ಲಿ 68 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ಬಿಂಡಿಗನವಿಲೆ, ನಾಗಮಂಗಲ ಪಟ್ಟಣ, ಬೆಳ್ಳೂರು ಹಾಗೂ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರಿಗೆ ಲೋಕ ಅದಾಲತ್‌ನ ಅರಿವು ಮೂಡಿಸುವ ಮೂಲಕ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಲು ಪೂರ್ಣಪ್ರಮಾಣದಲ್ಲಿ ಸಹಕರಿಸುವಂತೆ ಮನವಿ ಮಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ದೀಪಕ್ ಪಾಟೀಲ್ ಮಾತನಾಡಿದರು. ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್, ಅಪರ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ, ಸಹಾಯಕ ಸರ್ಕಾರಿ ಅಭಿಯೋಜಕಿ ಅರುಣಾಬಾಯಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ರಮೇಶ್‌ಗೌಡ ಇತರರಿದ್ದರು.