ಜಿಲ್ಲೆ

ಲೋಕ ಅದಾಲತ್‌ನಲ್ಲಿ ಇಬ್ಬರಿಗೂ ಗೆಲುವಾಗಲಿದೆ

ನಾಗಮಂಗಲ: ಲೋಕಾ ಅದಾಲತ್‌ನಲ್ಲಿ ಕಕ್ಷಿದಾರರಿಬ್ಬರು ಪರಸ್ಪರ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವುದರಿಂದ ಯಾರಿಗೂ ಸೋಲಾಗದೆ ಇಬ್ಬರಿಗೂ ಜಯ ಸಿಕ್ಕಂತಾಗಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲೋಕಾ ಅದಾಲತ್‌ನಲ್ಲಿ ಪಾಲ್ಗೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ದೀಪಕ್ ಪಾಟೀಲ್ ಸಲಹೆ ನೀಡಿದರು.


ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಗುರುವಾರ ಲೋಕ ಅದಾಲತ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳು, ವಕೀಲರು, ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.


ಉತ್ತಮ ಸಮಾಜ ನಿರ್ಮಾಣಕ್ಕೆ ಲೋಕ ಅದಾಲತ್ ಸಹಕಾರಿಯಾಗಲಿದ್ದು, ಇಬ್ಬರು ಕಕ್ಷಿದಾರರು ಗೆಲುವು ಸಾಧಿಸಬೇಕೆಂದರೆ ಲೋಕ ಅದಾಲತ್‌ನ ರಾಜಿ ಸಂಧಾನದಿಂದ ಮಾತ್ರ ಸಾಧ್ಯ. ಕಾನೂನನ್ನು ಗೌರವಿಸುವ ಮೂಲಕ ರಾಜಿ ಸಂಧಾನವನ್ನು ಕಾನೂನುಬದ್ಧವಾಗಿ ಮಾಡಲಾಗುವುದು. ಅದಾಲತ್‌ನಿಂದ ದ್ವೇಷ, ಅಸೂಯೆ, ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುವುದನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಪೊಲೀಸರು ಹಾಗೂ ವಕೀಲರು ಕಕ್ಷಿದಾರರಿಗೆ ಅದಾಲತ್ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ಲೋಕ ಅದಾಲತ್ ಯಶಸ್ವಿಗೆ ಸಹಕರಿಸಬೇಕು ಎಂದರು.


ಕಿರಿಯ ಸಿವಿಲ್ ನ್ಯಾಯಾಧೀಶ ಗಿರಿಗೌಡ ಮಾತನಾಡಿ, ಜೂ. 24 ರಂದು ನಿಗದಿಯಾಗಿದ್ದ ಲೋಕ ಅದಾಲತ್ ಅನ್ನು ಜುಲೈ 8ಕ್ಕೆ ಮುಂದೂಡಲಾಗಿದೆ. ವಕೀಲರ ಸಂಘದ ಸದಸ್ಯರೆಲ್ಲರೂ ರಾಜಿಯಾಗಬೇಕಾದ ಪ್ರಕರಣಗಳನ್ನು ಗುರುತಿಸಿ 4 ವಿಭಾಗದ ನ್ಯಾಯಾಲಯಗಳಲ್ಲಿಯೂ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕಿದೆ. ಬಿಂಡಿಗನವಿಲೆ, ನಾಗಮಂಗಲ ಪಟ್ಟಣ, ಬೆಳ್ಳೂರು ಹಾಗೂ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರಿಗೆ ಲೋಕ ಅದಾಲತ್‌ನ ಅರಿವು ಮೂಡಿಸುವ ಮೂಲಕ ಹೆಚ್ಚು ಪ್ರಕರಣಗಳು ಇತ್ಯರ್ಥಗಳಾಗಲು ಸಹಕರಿಸುವಂತೆ ತಿಳಿಸಿದರು.


ನ್ಯಾಯಾಧೀಶರಾದ ಯೋಗೇಶ್, ವೃತ್ತ ಆರಕ್ಷಕ ನಿರೀಕ್ಷಕ ನಿರಂಜನ್, ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಪಿಎಸ್ಸೈಗಳಾದ ಲೋಕೇಶ್, ರವಿಕುಮಾರ್, ವಕೀಲರಾದ ಕೆಂಪೇಗೌಡ, ಪ್ರಭುಸ್ವಾಮಿ, ಟಿ.ಕೆ.ರಾಮೇಗೌಡ, ರುಕ್ಮಣಿ, ಪುರುಷೋತ್ತಮ್ ಸೇರಿದಂತೆ ಮತ್ತಿತರಿದ್ದರು.