- ಚನ್ನರಾಯಪಟ್ಟಣ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಚನ್ನರಾಯಪಟ್ಟಣ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ಬೆಳಗ್ಗೆ 10.30 ರಿಂದ ಸಂಜೆ 5ರವರೆಗೆ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅದಾಲತ್ ಕಲಾಪ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಹಿರಿಯ ನ್ಯಾಯಾಧೀಶ ದೇವಾನಂದ್ ಅವರು, ಪಟ್ಟಣದ ಎಲ್ಲ ನ್ಯಾಯಾಲಯಗಳ ಸಂಕೀರ್ಣದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ಇಬ್ಬರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಮೆಗಾ ಲೋಕ ಅದಾಲತ್ ಆಯೋಜಿಸಲಾಗಿತ್ತು ಎಂದರು.
ಈ ಲೋಕ ಅದಾಲತ್‌ನಲ್ಲಿ ಹೊಲ, ಮನೆ, ಬ್ಯಾಂಕು, ಅಪಘಾತ, ಚೆಕ್ ಬೌನ್ಸ್, ಜನನ, ಸಹಕಾರಿ, ಸಣ್ಣಪುಟ್ಟ ಗಲಾಟೆ, ಆರೋಪ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ವಿಚಾರಣೆ ಮಾಡುವುದರ ಮೂಲಕ ಇಂದೇ ಅಂತಿಮ ನಿರ್ಣಯದ ಮೂಲಕ ರಾಜಿ ಮಾಡಲಾಗಿದೆ. ಅಲ್ಲದೆ ಅಪಘಾತ ಪ್ರಕರಣ, ಜೀವನಾಂಶ ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದರು.
ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಒಬ್ಬರು ಗೆಲ್ಲುತ್ತಾರೆ, ಮತ್ತೊಬ್ಬರಿಗೆ ಸೋಲಾಗುತ್ತದೆ. ಆದರೆ ಅದಾಲತ್‌ನಲ್ಲಿ ಇಬ್ಬರಿಗೂ ತೃಪ್ತಿಯಾಗುವ ತೀರ್ಮಾನ ಮಾಡಲಾಗುತ್ತದೆ. ಲೋಕ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳ ಆದೇಶ ಅಂತಿಮವಾಗಿರುತ್ತದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಅದಾಲತ್‌ನಲ್ಲಿ ವಿವಿಧ ರೀತಿಯ ಸುಮಾರು 715 ಕ್ಕಿಂತ ಹೆಚ್ಚು ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 179 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
.