ಜಿಲ್ಲೆ

ಲೈಸನ್ಸ್ ನೀಡುವ ಅಧಿಕಾರ ಗ್ರಾ.ಪಂ. ಅಧ್ಯಕ್ಷರಿಗೆ ಇರಲಿ: ಎಂಎಲ್ ಸಿ ಡಾ.ಡಿ.ತಿಮ್ಮಯ್ಯ ಆಗ್ರಹ

ಮೈಸೂರು: ವಾಣಿಜ್ಯ ಉದ್ದೇಶಕ್ಕೆ ಪರವಾನಗಿ(ಲೈಸನ್ಸ್) ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಕಿತ್ತು ಪಿಡಿಒಗೆ ನೀಡುವ ಕ್ರಮ ಸರಿಯಲ್ಲ. ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸರ್ಕಾರವನ್ನು ಒತ್ತಾಯಿಸಿದರು.
ಅಧಿಕಾರ ವಿಕೇಂದ್ರೀಕರಣ ಆಶಯದೊಂದಿಗೆ ಜಾರಿಗೆ ಬಂದ ಮಹತ್ವದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿ ತರುವ ಮೂಲಕ ಬಿಜೆಪಿ ಸರ್ಕಾರ, ಪಂಚಾಯಿತಿ ಪ್ರತಿನಿಧಿಗಳ ಅಧಿಕಾರವನ್ನು ಪಿಡಿಒ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ನೀಡಿರುವುದು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಪಮಾನಿಸಿದಂತಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರವನ್ನು ಅಧ್ಯಕ್ಷರಿಂದ ಕಿತ್ತುಕೊಳ್ಳಲಾಗಿದೆ. ಈಗ ಕಟ್ಟಡ, ಹೋಟೆಲ್, ಅಂಗಡಿ, ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡಲು ಅಧ್ಯಕ್ಷರು, ಸದಸ್ಯರ ಅಧಿಕಾರವನ್ನು ಗ್ರಾಮ ಪಂಚಾಯಿತಿ ಸಭೆಗಳು ಸಕಾಲಕ್ಕೆ ನಡೆಯದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಕುಂಟು ನೆಪವೊಡ್ಡಿ ಲೈಸೆನ್ಸ್ ನೀಡುವ ಅಧಿಕಾರವನ್ನು ಜನಪ್ರತಿನಿಧಿಗಳಿಂದ ಕಿತ್ತುಕೊಂಡಿರುವುದು ಸರಿಯಲ್ಲ ಎಂದರು.
ಇ-ಸ್ವತ್ತು ತಂತ್ರಾಂಶದ ಮೂಲಕ ತೆರಿಗೆ ನಿರ್ಧರಣೆ ಪಟ್ಟಿ (ನಮೂನೆ-9, 11ಎ ಮತ್ತು 11 ಬಿ)ಗಳನ್ನು ವಿತರಿಸಲು ಪಂಚಾಯತ್ ರಾಜ್ ನಿಯಮಗಳು 2006 ನಮೂನೆಗಳಲ್ಲಿ ಗ್ರಾಮ ಪಂಚಾಯತ್ ನಿರ್ಣಯ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಲು ಅವಕಾಶವಿತ್ತು. ‘ಡಿ’ ಗ್ರೂಪ್ ನೌಕರರನ್ನು ಆಯಾಯ ಪಂಚಾಯಿತಿಗೆ ನೇಮಕ ಮಾಡಿಕೊಳ್ಳುವ ಅಧಿಕಾರ ನೀಡುವುದನ್ನು ಪುರಸ್ಕರಿಸಬೇಕು. ಅಧಿಕಾರ ಕಿತ್ತುಕೊಳ್ಳುವ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮೈಸೂರು ಸಂಸ್ಥಾನದಲ್ಲಿ ಒಡೆಯರ್‌ಗಳ ಕೊಡುಗೆ ಅಪಾರವಾಗಿದ್ದು, ಅವರ ಹೆಸರನ್ನು ಬೇರೆ ರೈಲಿಗೆ ನಾಮಕರಣ ಮಾಡಬಹುದಾಗಿತ್ತು. ಆದರೆ ಈಗಾಗಲೇ ಹೆಸರು ಇರುವ ಇಟ್ಟಿರುವ ಟಿಪ್ಪು ಹೆಸರನ್ನು ತೆಗೆದು ಒಡೆಯರ್ ಹೆಸರು ಇಟ್ಟಿರುವುದು ದೊಡ್ಡ ಸಾಧನೆಯಲ್ಲ. ಇಂತಹ ಸಣ್ಣತನದ ಕೆಲಸ ಸರಿಯಲ್ಲ ಎಂದು ಟೀಕಿಸಿದರು.
ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜು, ಉಪಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಡತೊರೆ ಮಹೇಶ್, ತಾಲೂಕು ಅಧ್ಯಕ್ಷ ಗುರುಮೂರ್ತಿ ಇದ್ದರು.