ಜಿಲ್ಲೆ

ಲೈಂಗಿಕ ಹಗರಣ ವಿರುದ್ಧ ಮೇ 30 ರಂದು ನಗರದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ

ಹಾಸನ: ಸಂಸದ ಪ್ರಜ್ವಲ್‌ರೇವಣ್ಣ ಅವರಿಂದ ನಡೆದಿರುವ ವಿಕೃತ ಲೈಂಗಿಕ ಹಗರಣ ವಿರೋಧಿಸಿ, ಆರೋಪಿಯನ್ನು ಬಂಧಿಸಬೇಕು,ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು ಹಾಗೂ ಅಶ್ಲೀಯ ವಿಡಿಯೋ ಹರಿಬಿಟ್ಟು ಮಹಿಳೆಯರ ಮಾನ ಹರಾಜು ಮಾಡಿರುವವರ ವಿರುದ್ಧ ಕ್ರಮಕ್ಕೆ ಆಗಮಿಸಿ ಇದೇ ತಿಂಗಳ 30 ರಂದು ನಗರದಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಹಾಗೂ ಮಹಿಳಾ ಪರ ಹೋರಾಟಗಾರ್ತಿ ರೂಪಾ ಹಾಸನ್ ಹೇಳಿದರು.
ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಜ್ವಲ್ ಎಸಗಿರುವ ಕೃತ್ಯದಿಂದ ಎಷ್ಟೋ ಮಹಿಳೆಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಪರ ದನಿಯಾಗಿ ಈ ಹೋರಾಟ ಸಂಘಟಿಸಲಾಗಿದೆ. ಈ ಕೃತ್ಯ ನಿಜಕ್ಕೂ ವಿಷಾದನೀಯ ಸಂಗತಿ, ಹಾಸನದ ಮೇಲೆ ಸುನಾಮಿ ಅಪ್ಪಳಿಸಿದಂತೆ ಆಗಿದೆ. ಇಂಥ ಘಟನೆಯನ್ನು ನಾವು ಎಲ್ಲೂ ಕಂಡಿಲ್ಲ.ಇದಕ್ಕೆ ಕಾರಣನಾಗಿರುವ ಸಂಸದನನ್ನು ಕೂಡಲೇ ಬಂಧಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಅಶ್ಲೀಲ ವಿಡಿಯೋಗಳನ್ನು ರಾಜಕೀಯ ದ್ವೇಷದಿಂದ ಹಂಚಿದರೋ, ಅವರವರ ಸ್ವಾರ್ಥ ಸಾಧನೆಗಾಗಿ ಕಂತು ಕಂತಾಗಿ ಯಾರು ಬಿಡುಗಡೆ ಮಾಡಿದರೋ ಗೊತ್ತಿಲ್ಲ. ಆದರೆ ಇದನ್ನು ಚುನಾವಣೆಗೆ ಬಳಸಿಕೊಂಡಿದ್ದು ರಾಜಕೀಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಇದು ಹೀನಾಯ ಬೆಳವಣಿಗೆ ಎಂದು ಬೇಸರ ಹೊರ ಹಾಕಿದರು.
ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೆಣ್ಣು ಮಕ್ಕಳನ್ನು ದಾಳವಾಗಿ ಬಳಸಿಕೊಂಡಿದ್ದು ಬೇಸರ ತರಿಸಿದೆ. ಹಾಸನಾಂಬೆ, ಪುರದಮ್ಮ ದೇವಿಯರಿಗೆ ಪೂಜೆ ಸಲ್ಲಿಸುವ ರಾಜಕಾರಣಿಗಳಿಗೆ ಆ ದೇವಿಯೀ ಶಿಕ್ಷೆ ಕೊಡಬೇಕು. ಇದೇ ವೇಳೆ ಲೈಂಗಿಕ ಹಗರಣದ ಆರೋಪಿ ಬಂಧನ ವಿಳಂಬವಾಗಿರುವುದು ನೋವು ತರಿಸಿದೆ ಎಂದರು.
ನಮ್ಮ ಬೇಡಿಕೆ ವಿಡಿಯೋ ಮಾಡಿದ, ಹಂಚಿದ, ದುರ್ಬಳಕೆ ಮಾಡಿ ಕೊಂಡಿರುವವರನ್ನು ಕೂಡಲೇ ಬಂಧಿಸಿಸಬೇಕು ಎಂಬುದಾಗಿದೆ. ಜೊತೆಗೆ ನೊಂದ ಮಹಿಳೆಯರಿಗೆ ನ್ಯಾಯ ಸಿಗಬೇಕು ಎಂದ ಅವರು, ಹೋರಾಟದ ಹಿಂದೆ ರಾಜಕೀಯ ಇಲ್ಲ. ರಾಜಕೀಯ ಪ್ರೇರಿತ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಂದಿನ ಹೋರಾಟದಲ್ಲಿ ಸುಮಾರು 10 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಪ್ರಮುಖವಾಗಿ ರಾಷ್ಟ್ರೀಯ ಮಹಿಳಾ ಹೋರಾಟಗಾರ್ತಿ ಸುಭಾಷಿಣಿ ಅಲಿ, ರಾಜ್ಯದ ಎಸ್.ಆರ್.ಹಿರೇಮಠ್, ಸಬೀರಾ-ಭೂಮಿಗೌಡ, ಅಕೈ ಪದ್ಮಸಾಲಿ, ಒಡನಾಡಿಯ ಸ್ಟ್ಯಾನ್ಲಿ, ಪರಶುರಾಂ, ಮೀನಾಕ್ಷಿ, ವಿಮಲಾ, ಹಿ.ಶಿ. ರಾಮಚಂದ್ರೇಗೌಡ, ಕಾಳೇಗೌಡ ನಾಗವಾರ, ಜನ್ನಿ, ದು.ಸರಸ್ವತಿ,ಜಾಣಗೆರೆ ವೆಂಕಟರಾಮಯ್ಯ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್ ಹಾಗೂ ಪ್ರಗತಿಪರ ನಾಯಕರು, ಮುಖಂಡರುಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ನಗರ ಹಾಗೂ ಜಿಲ್ಲೆಯಲ್ಲೂ ಮಹಿಳೆಯರ ಮೇಲೆ ಗೌರವ ಇರುವವರು ನಮ್ಮ ಹೋರಾಟದಲ್ಲಿ ಭಾಗಿಯಾಗಬೇಕು. ಪಕ್ಷಾತೀತವಾಗಿ
ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಭಾರತಿ ರಾಜಶೇಖರ್,ಸುವರ್ಣ, ಡಾ.ರಂಗಲಕ್ಷ್ಮಿ, ಮಮತಾಶಿವು, ಇಂದ್ರಮ್ಮ, ಪ್ರಮೀಳಾ ಇದ್ದರು.