ಚಿತ್ರದುರ್ಗ: ಹದಿಹರೆಯದಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಪಾಲಕರು,ಶಿಕ್ಷಕರು ಗೌರವ ತಂದು ಕೊಡಬೇಕು. ಸಮಾಜದಲ್ಲಿ ಉತ್ತ ಮ ಪ್ರಜೆಗಳಾಗಿ ಜೀವನ ನಡೆಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ,ಹಿರಿಯ ನ್ಯಾಯಾಧೀಶ ಎಂ.ವಿಜಯ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ವಕೀಲರ ಸಂಘ,ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪೋಕ್ಸೊ ಕಾಯ್ದೆ ಮತ್ತು ಮಾದಕ ವಸ್ತುಗಳ ನಿಷೇಧ ಕುರಿತ ಕಾನೂನು ಅರಿವು ನೆರವು ಕಾರ‌್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು, ಲೈಂಗಿಕ ದೌರ್ಜನ್ಯಗಳೆಡೆ ಎಚ್ಚರದಿಂದ ಇರಬೇಕು. ಇಂಥ ದೌರ್ಜನ್ಯಗಳ ಹತೋಟಿಗಿರುವ ಕಾನೂನುಗಳ ಬಗ್ಗೆ ತಿಳಿವಳಿಕೆ ಅಗತ್ಯವೆಂದ ನ್ಯಾಯಾಧೀಶರು,ಮಾದಕ ವಸ್ತುಗಳ ಸೇವನೆದಿಂದ ಉಂಟಾಗುವ ಅಪಾಯಗಳ ಕುರಿತು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ,ಕಾನೂನಿನ ಪಾಲನೆಯಲ್ಲಿ ಎಲ್ಲರ ಸಹಕಾರದ ಅಗತ್ಯವಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಬದುಕನ್ನು ಕಟ್ಟಿಕೊಂಡು ದೇಶದ ಭವಿಷ್ಯವನ್ನು ಉಜ್ವಲಗೊಳಿಸ ಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ,ಮನಸ್ಸನ್ನು ಹಾಳುಮಾಡಿಕೊಂಡರೆ ಜೀವನ ಹಾಳಾಗುತ್ತದೆ ಎಂದರು. ವಕೀಲ ರಾದ ಎಸ್.ಸಿ.ರಾಜಪ್ಪ ಹಾಗೂ ಎಂ.ಮೂರ್ತಿ ಅವರು ಉಪನ್ಯಾಸ ನೀಡಿದರು. ಪ್ರಾಂಶುಪಾಲ ಇ.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್,ಶಿಕ್ಷಣ ಸಂಸ್ಥೆ ಬೋಧಕ,ಬೋಧಕೇತರ ಸಿಬ್ಬಂದಿ ಇದ್ದರು.