ಮಡಿಕೇರಿ: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಮಡಿಕೇರಿಯ ಲೇಖಕಿ ದೀಪಾಭಾಸ್ತಿಯವರ ಸಾಹಿತ್ಯ ಸಾಧನೆ ಕೊಡಗಿನ ಜನತೆಗೇ ಹೆಮ್ಮೆ ತಂದಿದ್ದು, ಭವಿಷ್ಯದಲ್ಲಿಯೂ ಲೇಖಕಿಯ ಯಾವುದೇ ಸಾಹಿತ್ಯ ಪರ ಚಟುವಟಿಕೆಗಳಿಗೆ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು. ಬೂಕರ್ ಪ್ರಶಸ್ತಿಯು ಅನುವಾದ ಸಾಹಿತ್ಯದ ನಿಜವಾದ ಶಕ್ತಿಯನ್ನು ನಿರೂಪಿಸಿದೆ ಎಂದು ಶಾಸಕರು ಹೇಳಿದರು.
ನಗರದಲ್ಲಿರುವ ದೀಪಾಭಾಸ್ತಿ ಅವರ ಮನೆಗೆ ತೆರಳಿದ ಡಾ.ಮಂತರ್ ಗೌಡ, ಕಾಫಿ ಹಾರದ ಮೂಲಕ ಗೌರವ ಸನ್ಮಾನವನ್ನು ನೆರವೇರಿಸಿದರಲ್ಲದೇ ದೀಪಾಭಾಸ್ತಿ ಅವರು ಈ ಸಂದರ್ಭ ನೀಡಿದ ಪ್ರಶಸ್ತಿ ವಿಜೇತ ಕೃತಿ ಹಾರ್ಟ್ ಲ್ಯಾಂಪ್‌ನ್ನು ಗೌರವಪೂರ್ವಕವಾಗಿ ಸ್ವೀಕರಿಸಿದರು.
ದೀಪಾಭಾಸ್ತಿಯವರ ಸಾಹಿತ್ಯ ಸಾಧನೆಯನ್ನು ಶ್ಲಾಘಿಸಿದ ಶಾಸಕ ಡಾ.ಮಂತರ್ ಗೌಡ, ಬೂಕರ್ ಪ್ರಶಸ್ತಿಯಂಥ ಜಗತ್ತಿನಲ್ಲಿ ಸಾಹಿತ್ಯಕ್ಕಾಗಿನ ಶ್ರೇಷ್ಟ ಪ್ರಶಸ್ತಿಯನ್ನು ಮಡಿಕೇರಿಯ ಲೇಖಕಿ ಪಡೆದುಕೊಳ್ಳುವ ಮೂಲಕ ಕೊಡಗು, ಕರ್ನಾಟಕ ಮಾತ್ರವೇ ಅಲ್ಲದೇ ಭಾರತವೇ ಮಡಿಕೇರಿಯತ್ತ ಗಮನ ಹರಿಸುವಂತೆ ದೀಪಾಭಾಸ್ತಿ ಮಾಡಿದ್ದಾರೆ. ಈ ಸಾಹಿತ್ಯ ಸಾಧನೆ ಜಗತ್ತಿನ ಸಾಹಿತ್ಯ ಲೋಕದ ಇತಿಹಾಸದಲ್ಲಿ ಅಚ್ಚಳಿಯದೇ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ನೆರವನ್ನು ನೀಡಲು ಸಿದ್ದವಿರುವುದಾಗಿ ತಿಳಿಸಿದರು.
ಬಾನುಮುಷ್ತಾಕ್ ಅವರ ಎದೆಯ ಹಣತೆ ಕೃತಿಯನ್ನು ಹಾರ್ಟ್ ಲ್ಯಾಂಪ್ ಎಂಬ ಆಂಗ್ಲ ಭಾಷಾ ಕೃತಿಗೆ ಅನುವಾದಿಸಲು ಪಟ್ಟಿರಬಹುದಾದ ಶ್ರಮ ಊಹೆಗೂ ನಿಲುಕದ್ದು. ಮಡಿಕೇರಿಯ ಪರಿಸರದ ನಡುವಿನ ಮನೆಯಲ್ಲಿಯೇ ಇಂಥ ಪ್ರಯತ್ನವನ್ನು ದೀಪಾಭಾಸ್ತಿ ಮಾಡಿರುವುದು ಹೆಮ್ಮೆ ಪಡುವ ವಿಚಾರ, ಮಡಿಕೇರಿಯ ನಿಸರ್ಗ ಕೂಡ ಇಂಥ ಸಾಹಿತ್ಯಕ್ಕೆ ಸ್ಪೂರ್ತಿಯಾಗಿರುವುದು ಗಮನಾರ್ಹ ಎಂದೂ ಡಾ.ಮಂತರ್ ಗೌಡ ಹೇಳಿದರು.
ವಿದ್ಯಾರ್ಥಿಗಳು ಮತ್ತು ಯುವಪೀಳಿಗೆಗೆ ದೀಪಾಭಾಸ್ತಿ ಆದರ್ಶವಾಗಿದ್ದಾರೆ. ಈ ನಿಟ್ಟಿನಲ್ಲಿ ಕೊಡಗಿನ ವಿವಿಧ ಶಿಕ್ಷಣ ಸಂಸ್ಥೆಗಳ ಆಸಕ್ತ ವಿದ್ಯಾರ್ಥಿಗಳೊಂದಿಗೆ ಲೇಖಕಿಯ ಸಂವಾದ ಏರ್ಪಡಿಸಿ, ಸಾಹಿತ್ಯ, ಲೇಖನ ಬರೆಯುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಈ ಸಂದರ್ಭ ಮಾತನಾಡಿದ ದೀಪಾಭಾಸ್ತಿ, ತಾನು ಭಾನುಮುಷ್ತಾಕ್ ಅವರು ಬರೆದ ಎದೆಯ ಹಣತೆ ಸೇರಿದಂತೆ ಇತರ ಕೃತಿಗಳಲ್ಲಿನ ೧೨ ಆಯ್ದ ಕಥೆಗಳನ್ನು ಹಾರ್ಟ್ ಲ್ಯಾಂಪ್ ಮೂಲಕ ಅನುವಾಸಿದ್ದು, ಬೂಕರ್ ಪ್ರಶಸ್ತಿಯು ಅನುವಾದಕ್ಕಾಗಿ ಸಂದದ್ದು ಸಂತೋಷ ತಂದಿದೆ. ಸುಮಾರು ೩ ವರ್ಷಗಳ ಅವಿರತ ಶ್ರಮ ಈ ಸಾಧನೆಯ ಹಿಂದಿದೆ. ಸದ್ಯದಲ್ಲಿಯೇ ಲಂಡನ್‌ಗೆ ಮತ್ತೆ ತೆರಳಿ ಅಲ್ಲಿಂದ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಸಂಚರಿಸಿ ಅಲ್ಲಿ ಹಾರ್ಟ್ ಲ್ಯಾಂಪ್ ಕೃತಿಯ ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದ ಅವರು, ಕೊಡಗಿನ ಪ್ರಕೃತ್ತಿ ಸಿರಿ ಲೇಖಕರಿಗೆ ನಿಜವಾದ ಸ್ಪೂರ್ತಿಯಾಗಿದೆ ಎಂದು ಹರ್ಷದಿಂದ ನುಡಿದರು.
ದೀಪಾಭಾಸ್ತಿ ಪತಿ ಚೆಟ್ಟೀರ ನಾಣಯ್ಯ, ಪೋಷಕರಾದ ಪ್ರಕಾಶ್ ಭಾಸ್ತಿ, ಸುಧಾಭಾಸ್ತಿ, ಪತ್ರಕರ್ತ ಎಚ್.ಟಿ.ಅನಿಲ್ ಈ ಸಂದರ್ಭ ಹಾಜರಿದ್ದರು.
ಹೆಗ್ಗೋಡುವಿನ ಸಮುದ್ಯತಾ ವೆಂಕಟರಾಮು ಅವರ ಇದೇ ಅಂದರೆ ಇದೆ. ಇಲ್ಲ ಅಂದರೆ ಇಲ್ಲ ಎಂಬ ಕೃತಿಯನ್ನು ಈಗ ಇಂಗ್ಲೀಷ್‌ಗೆ ಅನುದಾದಿಸುತ್ತಿದ್ದೇನೆ. ಜತೆಗೇ ಸ್ವಂತ ಕೃತಿ ಕೂಡ ಪ್ರಕಟವಾಗಬೇಕಾಗಿದೆ. ಹಾರ್ಟ್ ಲ್ಯಾಂಪ್ ಖಂಡಿತವಾಗಿಯೂ ಎದೆಯ ಹಣತೆಯ ಪೂರ್ಣ ಕಥೆಗಳನ್ನು ಒಳಗೊಂಡಿಲ್ಲ. ಬದಲಿಗೆ ಎದೆಯ ಹಣತೆ ಕಥಾ ಸಂಕಲನದ ೩ ಕಥೆ ಮಾತ್ರ ಹಾರ್ಟ್ ಲ್ಯಾಂಪ್‌ನಲ್ಲಿದೆ.
-ದೀಪಾ ಭಾಸ್ತಿ, ಬೂಕರ್ ಪ್ರಶಸ್ತಿ ಪಡೆದ ಲೇಖಕಿ