ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಲೇಖಕರು ಹಾಗೂ ಕಥೆಗಾರರು ವರ್ತಮಾನಕ್ಕೆ ಸ್ಪಂದಿಸಬೇಕಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಮಹಾದೇವ ಶಂಕನಪುರ ಸಲಹೆ ನೀಡಿದರು.
ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ಹಾಗೂ ಕಾವ್ಯ ಸ್ಪಂದನ ಪಬ್ಲಿಕೇಶನ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಾಹಿತಿ ಕೆ.ಧರ್(ಸಿರಿ) ಅವರ ಕನ್ನಡ ಪುಸ್ತಕಗಳ ಮರು ಲೋಕಾರ್ಪಣೆ ಮತ್ತು ‘ದಿ ಬಿಗ್ ಚಂಪಕ’ ಇಂಗ್ಲೀಷ್ ಕಥಾ ಸಂಕಲನ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಥೆಗಾರರು ಮತ್ತು ಲೇಖಕರು ಬದಲಾವಣೆಗೆ ಒಡ್ಡಿಕೊಳ್ಳಬೇಕಿದೆ. ನಾವು ಎಷ್ಟರ ಮಟ್ಟಿಗೆ ವರ್ತಮಾನಕ್ಕೆ ಸ್ಪಂದಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಯಾವ ಭಾಷೆ ಮೊದಲು ಮತ್ತು ಯಾವುದು ನಂತರ ಎಂಬ ಚರ್ಚೆಗಳ ನಡುವೆ, ಯಾವ ಯಾವ ಭಾಷೆಗಳು ಹೇಗೆ ಬೆಳೆದಿದೇ ಎಂಬುದು ಮುಖ್ಯವಾಗುತ್ತದೆ. ಪ್ರಯಾಗ್‌ರಾಜ್ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣಗಳು ಯುವ ಜನಾಂಗ ದಿಕ್ಕು ತಪ್ಪುತ್ತಿರುವುದನ್ನು ತೋರುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ಭಾಷೆ, ರಾಜ್ಯ ಮತ್ತು ದೇಶದ ಗಡಿಯನ್ನು ದಾಟಿ ಮನುಷ್ಯ ಪ್ರೇಮವನ್ನು ಕಟ್ಟಿಕೊಡಬೇಕಿದೆ ಎಂದರು.
ಮೂಲತಃ ಬಳ್ಳಾರಿ ಜಿಲ್ಲೆಯವರಾದ ಶ್ರೀಧರ್ ಅವರು ಕಂದಾಯ ಇಲಾಖೆಯ ನೌಕರರಾಗಿ ಕವಿ, ಕಥೆಗಾರ, ನಾಟಕಕಾರರಾಗಿ ತೊಡಗಿಸಿಕೊಂಡಿರುವುದು ಮೆಚ್ಚುವಂತದ್ದಾಗಿದೆ. ಅವರ ಕವನ, ಕಥಾ ಸಂಕಲನಗಳಲ್ಲಿ ಸ್ಥಳೀಯವಾದ ಭಾಷೆಯನ್ನು ದುಡಿಸಿಕೊಂಡಿದ್ದಾರೆ. ನಮ್ಮ ಜಿಲ್ಲೆಯ ಸಂಸ್ಕೃತಿ, ಸ್ಥಳ ಪುರಾಣ ಮತ್ತು ಜಾನಪದ ಪರಂಪರೆಯನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿದ್ದಾರೆ. ತಮ್ಮನ್ನು ತಾವು ಲೀನಗೊಳಿಸಿಕೊಂಡಿದ್ದಾರೆ. ಕನ್ನಡ ನೆಲಕ್ಕೆ ಬೂಕರ್ ಪ್ರಶಸ್ತಿ ಬಂದಿರುವ ಈ ಕಾಲಘಟ್ಟದಲ್ಲಿ ಅನುವಾದ ಕೃತಿಗಳು ಮಹತ್ವವನ್ನು ಪಡೆದುಕೊಳ್ಳುತ್ತದೆ ಎಂದರು ಹೇಳಿದರು.
ಕಾರ್ಯಕ್ರಮದಲ್ಲಿ ಕೃತಿಯ ಅನುವಾದಕಿ ಮತ್ತು ಕವಯತ್ರಿ ಪದ್ಮಜಾ ಜೋಯ್ಸ, ಸಾಲು ಮರದ ವೆಂಕಟೇಶ್, ಅನಿಲ್ ಕುಮಾರ್ ಹೊಸೂರು, ಸಾಹಿತಿ ಕೆ.ಶ್ರೀಧರ್ ಹಾಗೂ ಇತರರು ಹಾಜರಿದ್ದರು.
ಶ್ರೀಧರ್ ಕಥೆಗಳಲ್ಲಿ ಸಾಂಸ್ಕೃತಿಕ ಅನನ್ಯತೆ:
ಕಂದಾಯ ಇಲಾಖೆಯ ಹಲವಾರು ಅಧಿಕಾರಿಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಅಂತವರ ಸಾಲಿನಲ್ಲಿ ಸೇರುವ ಕೆ.ಶ್ರೀಧರ್ ಅವರು ತಮ್ಮ ಕಥೆಗಳಲ್ಲಿ ಸಾಂಸ್ಕೃತಿಕ ಅನನ್ಯತೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ವಿಮರ್ಶಕ ಹಾಗೂ ಹಿರಿಯ ಸಾಹಿತಿ ಮಹೇಶ್ ಹರವೆ ಹೇಳಿದರು. ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ, ಶ್ರೀಧರ್ ಕಥೆಗಳಲ್ಲಿ ಸೋಲಿಗರ ಬದುಕನ್ನು ಕುರಿತಾದ ಹಲವು ಕಥೆಗಳು ಮೂಡಿಬಂದಿದೆ. ಯಾವುದೇ ಮೌಢ್ಯಗಳನ್ನು ಒಪ್ಪದ ಶ್ರೀಧರ್ ಅವರು ವೈಚಾರಿಕತೆಯಿಂದ ಕಥೆಗಳನ್ನು ಎಣೆದಿದ್ದಾರೆ. ಜಿಲ್ಲೆಯ ಹಲವಾರು ಗ್ರಾಮಗಳ ಬಗ್ಗೆ ಕೃತಿಯಲ್ಲಿ ಪರಿಚಯಿಸುತ್ತಾ ಹೋಗುತ್ತಾರೆ. ಅವರ ಪ್ರತಿಯೊಂದು ಬರವಣಿಗೆಯಲ್ಲಿ ಸಂಶೋಧನೆ ಅಡಗಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯ ಅತ್ಯಂತ ಒತ್ತಡದ ವೃತ್ತಿಯಾದ ಗ್ರಾಮ ಆಡಳಿತಾಧಿಕಾರಿ ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಸಾಧನೆ ಮಾಡಿರುವುದು ಖುಷಿಯ ವಿಚಾರವಾಗಿದೆ. ಶ್ರೀಧರ್ ಬಳ್ಳಾರಿಯವರಾಗಿ ಜಿಲ್ಲೆಯ ಆಡು-ನುಡಿಯನ್ನು ಕಥೆಯಲ್ಲಿ ಸೂಕ್ತ ರೀತಿಯಾಗಿ ಬಳಕೆ ಮಾಡಿದ್ದಾರೆ. ಇಂತಹ ಉತ್ಕೃಷ್ಟವಾದ ಕಥಾ ಸಂಕಲನ ಬೇರೆ ಭಾಷೆಗೆ ಭಾಷಾಂತರಗೊಂಡಿರುವುದು ಬಹುದೊಡ್ಡ ಸಾಧನೆಯಾಗಿದೆ.
&ಜವರೇಗೌಡ, ಅಪರ ಜಿಲ್ಲಾಧಿಕಾರಿ, ಚಾಮರಾಜನಗರ