ದಾವಣಗೆರೆ: ಪ್ರತಿ ವ್ಯಕ್ತಿಯ ನಿತ್ಯ ಜೀವನ ಗಣಿತಶಾಸ್ತ್ರದ ಮೇಲೆ ಅವಲಂಬನೆಯಾಗಿದೆ. ಲೆಕ್ಕಾಚಾರವೇ ಬದುಕಾಗಿದೆ ಎಂದು ಎವಿಕೆ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್. ಬಸವರಾಜಪ್ಪ ಹೇಳಿದರು.
ನಗರದ ಎ.ವಿ.ಕಮಲಮ್ಮ ಮಹಿಳಾ ಪದವಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದಿಂದ ಗುರುವಾರ, ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ 135ನೇ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮಾನವನ ಹುಟ್ಟಿನಿಂದ ಅಂತ್ಯದ ವರೆಗೆ ಪ್ರತಿ ಕ್ಷಣದಲ್ಲೂ ಗಣಿತ ಬೇಕು. ಕಟ್ಟುವ ಮನೆಯಿಂದ ಹಿಡಿದು ಪ್ರತಿ ಹಂತದಲ್ಲೂ ಗಣಿತ ಬಳಕೆಯಾಗುತ್ತದೆ. ನಮ್ಮೆಲ್ಲರ ಬದುಕಿನಲ್ಲಿ ನಮಗೆ ತಿಳಿಯದ ರೀತಿಯಲ್ಲಿ ಗಣಿತ ಹಾಸುಹೊಕ್ಕಾಗಿದೆ ಎಂದರು.
ರಾಮಾನುಜನ್ 3900ಕ್ಕೂ ಹೆಚ್ಚು ಸೂತ್ರಗಳನ್ನು ಕಂಡುಹಿಡಿದಿರುವುದು ಅವರ ಬದುಕಿನ ಮಹೋನ್ನತಿ ತಿಳಿಸುತ್ತದೆ. ನಮ್ಮ ಆರೋಗ್ಯ ಮತ್ತು ವೈದ್ಯಶಾಸ್ತ್ರದಲ್ಲಿ ಗಣಿತವು ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ದಾವಣಗೆರೆ ವಿಶ್ವವಿದ್ಯಾನಿಲಯ ಪಠ್ಯ ಭಾಗವು ಮಾರುಕಟ್ಟೆ, ವಾಣಿಜ್ಯ, ಇಂಜಿನಿಯರಿಂಗ್, ಮೆಡಿಕಲ್, ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು. ಅಲ್ಲದೆ ‘ಮ್ಯಾಥ್ಯಾಮೆಟಿಕಲ್ ಮಾಡ್ಲಿಂಗ್’ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ.ಪಿ. ಕುಮಾರ್ ಮಾತನಾಡಿ ಗಣಿತವೆಂಬುದು ಕೇವಲ ಸಂಖ್ಯೆ, ಆಕಾರ, ರೇಖೆಯಲ್ಲ. ಮಹಾಗಣಿತಜ್ಞರು ನೀಡಿದ ಸೂತ್ರಗಳು, ಗುಡ್ಡ-ಗೋಪುರದ ಎತ್ತರ ಅಳೆಯುವುದಷ್ಟೇ ಅಲ್ಲದೆ ಅಸಾಧ್ಯವಾದುದನ್ನು ಲೆಕ್ಕದ ಮೂಲಕ ಸಾಧ್ಯವಾಗಿಸುವ ಕ್ರಮಬದ್ಧವಾದ ಅಧ್ಯಯನವಾಗಿದೆ. ಶಾಲಾ-ಕಾಲೇಜು ಹಂತದಲ್ಲಿ ಅಧ್ಯಯನ ಮಾಡಿ ಗಣಿತವನ್ನು ಗೆಲ್ಲಬೇಕಿದೆ ಎಂದು ಹೇಳಿದರು.
ಶ್ರೀನಿವಾಸ ರಾಮಾನುಜನ್ ಕುರಿತು ಡಾ.ಜಿ.ದಿವ್ಯಶ್ರೀ ಪ್ರಾಸ್ತಾವಿಕ ಮಾತನಾಡಿದರು. ಐಕ್ಯುಎಸಿ ಸಂಚಾಲಕ ಪ್ರೊ.ಆರ್.ಆರ್. ಶಿವಕುಮಾರ್ ಮಾತನಾಡಿದರು. ರಶ್ಮಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಿ.ಜಿ.ಚಂದನಾ ಸ್ವಾಗತಿಸಿದರು,. ಖುರತ್ ಉಲ್ ಐನ್ ಮತ್ತು ಎಚ್. ಸಂಗೀತಾ ನಿರೂಪಿಸಿದರು. ಪವಿತ್ರಾ ವಂದಿಸಿದರು.
ದಾವಣಗೆರೆ ವಿವಿ ಮಟ್ಟದಲ್ಲಿ ಗಣಿತಶಾಸ್ತ್ರದಲ್ಲಿ ಪೂರ್ಣ 100 ಅಂಕ ಪಡೆದ ಕಾಲೇಜಿನ 8 ವಿದ್ಯಾರ್ಥಿನಿಯರನ್ನು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
---