ಬಸವಕಲ್ಯಾಣ: ಕನ್ನಡ ನಾಡು, ನುಡಿಗೆ ವಿಶೇಷ ಕೊಡುಗೆ ನೀಡಿದ್ದವರಲ್ಲಿ ಜಯದೇವಿ ತಾಯಿ ಲಿಗಾಡೆ ಒಬ್ಬರು. ಅವರ ಆದರ್ಶ ಬದುಕು, ಸಾಧನೆಗಳು ಅವಿಸ್ಮರಣೀಯ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ವತಿಯಿಂದ ಇಲ್ಲಿನ ಅನುಭವ ಮಂಟಪ ಪರಿಸರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ತಿಂಗಳ ಅನುಭವ ಮಂಟಪ, ಡಾ.ಜಯದೇವಿ ತಾಯಿ ಲಿಗಾಡೆ ೧೧೪ನೇ ಜಯಂತ್ಯುತ್ಸವ ಹಾಗೂ ಡಾ.ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೂಲತಃ ಮಹಾರಾಷ್ಟ್ರದ ಸೊಲ್ಲಾಪುರದವರಾದ ಲಿಗಾಡೆ ಅವರು ವಚನ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿ ಕನ್ನಡ ನಾಡು, ನುಡಿಯ ಏಳಿಗೆಗಾಗಿ ಜೀವಿಸಿದರು. ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ, ಕೊಡುಗೆ ಅನನ್ಯ ಎಂದರು.
ಲಿಂಗಾಡೆ ಬಸವತತ್ವ ನಿಷ್ಠರು. ಲಿಂ.ಚನ್ನಸವ ಪಟ್ಟದ್ದೇವರೊಂದಿಗೆ ಅನೋನ್ಯ ಸಂಬಂಧ ಹೊಂದಿದ್ದರು. ಕನ್ನಡ ಹಾಗೂ ವಚನ ಸಾಹಿತ್ಯದ ಬಗ್ಗೆ ಅಪಾರ ಅಭಿಮಾನ ಲಿಗಾಡೆ ಅವರಲ್ಲಿತ್ತು. ಅವರು ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಸೋಲ್ಲಾಪುರದ ಪ್ರಾಧ್ಯಾಪಕ ಗುರುಲಿಂಗಪ್ಪ ಧಬಾಲೆ ಉಪನ್ಯಾಸ ನೀಡಿದರು. ಲಿಗಾಡೆ ರಾಷ್ಟ್ರೀಯ ಪುರಸ್ಕಾರವನ್ನು ಬೀದರ್‌ನ ಪ್ರವಚನಕಾರ್ತಿ ಸುವರ್ಣಾ ಚಿಮಕೋಡೆ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ೨೫ ಸಾವಿರ ರೂ. ನಗದು ಒಳಗೊಂಡಿದೆ.
ಭಾಲ್ಕಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ, ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅನುಭವ ಮಂಟಪ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟಿ, ಕಾರ್ಯದರ್ಶಿ ಎಸ್.ಬಿ. ದುರ್ಗೆ, ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನ ಅಧ್ಯಕ್ಷ ಶ್ರೀಶೈಲ ಹುಡೇದ್, ಗುರುನಾಥಪ್ಪ ಸಜ್ಜನ್, ಕಾಶಿಬಾಯಿ ಶಿವಲಿಂಗ ಇತರರಿದ್ದರು.
ಸವಿತಾ ನಿರಂಜನ ದೇಶಮುಖ ಪ್ರಾಸ್ತಾವಿಕ ಮಾತನಾಡಿದರು. ಚೇತನಾ ಪಾಟೀಲ್ ಸ್ವಾಗತಿಸಿದರು. ಡಾ.ಸಂಗೀತಾ ಮಂಠಾಳೆ ನಿರೂಪಣೆ. ರಾಜಕುಮಾರ ಹೂಗಾರ ವಚನ ಗಾಯನ ಮಾಡಿದರು.
ಮೂರು ಗ್ರಂಥ ಲೋಕಾರ್ಪಣೆ: ಕಾರ್ಯಕ್ರಮದಲ್ಲಿ ಮೂರು ಗ್ರಂಥಗಳನ್ನು ಲೋಕಾರ್ಪಣೆ ಪ್ರೊ.ಸಿದ್ದಣ್ಣ ಲಂಗೋಟಿ ರಚಿತ ಧರ್ಮಪಿತ ವಿಶ್ವಗುರು ಬಸವಣ್ಣನವರು, ವಿಜಯಲಕ್ಷ್ಮೀ ಕೌಟಗೆ ಬರೆದ ವೈರಾಗ್ಯ ನಿಧಿ ಅಕ್ಕಮಹಾದೇವಿ ಹಾಗೂ ಸವಿತಾ ಮೂಗಿ ಸಂಪಾದಿಸಿದ ಕರುಳಿನ ಕಗ್ಗ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.
ಮೂಲತಃ ಮಹಾರಾಷ್ಟ್ರದವರಾದ ಜಯದೇವಿ ತಾಯಿ ಲಿಗಾಡೆ ವಚನ ಸಾಹಿತ್ಯ ಪ್ರಭಾವಕ್ಕೆ ಒಳಗಾಗಿ ಕನ್ನಡ ನಾಡು, ನುಡಿಗಾಗಿ ಶ್ರಮಿಸಿದರು. ಸೋಲ್ಲಾಪುರ ಕರ್ನಾಟಕಕ್ಕೆ ಸೇರ್ಪಡೆ ಆಗಬೇಕೆಂಬ ಅವರ ಕನಸು ನನಸಾಗಲೇ ಇಲ್ಲ. ಕನ್ನಡ ಮತ್ತು ಮರಾಠಿಯಲ್ಲಿ ಉತ್ತಮ ಗ್ರಂಥಗಳನ್ನು ರಚಿಸಿದ್ದಾರೆ.
| ಗುರುಲಿಂಗಪ್ಪ ಧಬಾಲೆ ಪ್ರಾಧ್ಯಾಪಕ