ಜಿಲ್ಲೆ

ಲಿಂಗೇಶ್ವರ ಸ್ವಾಮೀಜಿ ಸಂಸ್ಮರಣೋತ್ಸವ

ಹೂವಿನಹಡಗಲಿ: ಮಠಗಳಲ್ಲಿ ನಿತ್ಯ ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಶರಣರು ಈ ನಾಡನ್ನು ಕಟ್ಟುವ ಕೆಲಸ ಮಾಡಿದ್ದಾರೆ ಎಂದು ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಶಾಖಾ ಗವಿಮಠದಲ್ಲಿ ಲಿಂಗೇಶ್ವರ ಸ್ವಾಮೀಜಿ ಅವರ 23ನೇ ಪುಣ್ಯ ಸಂಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಬುಧವಾರ ಮಾತನಾಡಿದರು. ಸಾಕಷ್ಟು ಸಂಪತ್ತನ್ನು ಹೊಂದಿದವರು ಕೂಡ ನೆಮ್ಮದಿಯ ಜೀವನ ನಡೆಸಲಾಗುತ್ತಿಲ್ಲ. ನಾವು ಮಾಡುವ ಕಾಯಕದಲ್ಲಿ ನೆಮ್ಮದಿ ಹುಡುಕಬೇಕು. ನಾವು ಆತ್ಮಜ್ಞಾನವನ್ನು ಅರಿಯಬೇಕಾದ ಅವಶ್ಯ ಇದೆ. ಯುವ ಪೀಳಿಗೆಯೂ ತಂತ್ರಜ್ಞಾನದ ಹಿಂದೆ ಬಿದ್ದು ಗೊಂದಲಕ್ಕೆ ಸಿಲುಕಿಕೊಂಡಿದೆ ಎಂದರು.

ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಪ್ರಕೃತಿಯ ನಿಯಮದಂತೆ ಭೂಮಿ ಮೇಲಿನ ಎಲ್ಲ ಪಕ್ಷಿಗಳಿಗೆ ಬದುಕುವ ಸ್ವಾತಂತ್ರವಿದೆ. ಪ್ರಾಣಿ, ಪಕ್ಷಿಗಳ ಬದುಕನ್ನು ನೋಡಿ ನಾವು ಕಲಿಯಬೇಕಾಗಿದೆ ಎಂದರು.

ಶಿಕ್ಷಕ ಎಚ್.ಎಂ.ಕೊಟ್ರಯ್ಯ ಅವರ ‘ಭಾವ ಬೆಸುಗೆ’ ಹಾಗೂ ಡಾ.ಪಿ.ಎಂ.ಅನಿಲಕುಮಾರ ಅವರ ‘ಸಾವಿರದ ನೂರು ಕವಿತೆಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ವಿವಿಯ ಸಹಾಯಕ ಕುಲಸಚಿವ ಡಾ.ಎಂ.ಎಂ.ಶಿವಪ್ರಕಾಶ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸಬೇಕು ಎಂದರು.

ಶ್ರೀ ಮಠದಿಂದ ನೀಡುವ ಲಿಂಗೇಶ್ವರ ಪ್ರಶಸ್ತಿಯನ್ನು ಹಗರಿಬೊಮ್ಮನಹಳ್ಳಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಬಿ.ಶಿವಕುಮಾರಗೆ ನೀಡಲಾಯಿತು. ಶಾಖಾ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಮೈನಳ್ಳಿ ಹಿರೇಮಠದ ಸಿದ್ದೇಶ್ವರ ಸ್ವಾಮೀಜಿ, ಇಟಿಗಿಯ ಗುರುಶಾಂತ ದೇವರು, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಸಿ.ಕೆ.ಎಂ.ಬಸಲಿಂಗಯ್ಯ, ನಗರ ಘಟಕದ ಅಧ್ಯಕ್ಷ ಮುಂಡವಾಡ ಉಮೇಶ, ಡಾ.ನಾಗನಗೌಡ, ತಾಲೂಕ ಗಾಣಿಗ ಸಮಾಜದ ಅಧ್ಯಕ್ಷ ಎಂ.ಕಿರಣಕುಮಾರ, ಪ್ರಮುಖರಾದ ಎಸ್.ಎಸ್.ಹಿರೇಮಠ, ಕೋಡಿಹಳ್ಳಿ ಕೊಟ್ರೇಶ ಇತರರಿದ್ದರು.