ಜಿಲ್ಲೆ

ಲಿಂಗಾಯತರ ಸಂಸ್ಥೆಗೆ ಜಾಗ ಕೊಟ್ಟರೆ ಹೊಟ್ಟೆ ಉರಿ !

ಬಾಗಲಕೋಟೆ: ವೀರಶೈವ ಲಿಂಗಾಯತ ಸಮಾಜದ ಬಹುದೊಡ್ಡ ಸಂಸ್ಥೆಯಾಗಿರುವ ಬಿವಿವಿ ಸಂಘಕ್ಕೆ ತಾನು ಕಳೆದುಕೊಂಡ ಜಾಗಕ್ಕೆ ನ್ಯಾಯಯುತವಾಗಿ ಎರಡು ಪಟ್ಟಿಗಿಂತ ಕಡಿಮೆ ಜಾಗ ಕೊಟ್ಟರೆ ನಿಮಗೆ ಹೊಟ್ಟೆ ಉರಿಯುತ್ತದೆ. ಅದೇ ಕೆಲ ಸಂಸ್ಥೆಗಳಿಗೆ ಹತ್ತು, ಹದಿನೈದು ಪಟ್ಟು ಹೆಚ್ಚು ಜಾಗ ಕೊಟ್ಟಾಗ ನಿಮಗ ಹೊಟ್ಟೆ ಉರಿಯುವುದಿಲ್ಲ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬಿವಿವಿ ಸಂಘಕ್ಕೆ ಬಿಟಿಡಿಎಯಿಂದ ೨೦ ಎಕರೆ ವಿಸ್ತೀರ್ಣದ ಸೆಕ್ಟರ್ ನಂ. ೫೯ನ್ನು ಹಂಚಿಕೆ ಮಾಡಿದ್ದು ಕಾನೂನುಬಾಹಿರ ಎಂದು ರದ್ದು ಪಡಿಸಿರುವ ಸರ್ಕಾರದ ಆದೇಶದ ಹಿನ್ನಲೆ ಶುಕ್ರವಾರ ಸಂಘದ ಮಿನಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಿವಿವಿ ಸಂಘಕ್ಕೆ ಸೇರಿದ್ದ ವಿವಿಧ ದೇವಸ್ಥಾನಗಳ ಜಾಗೆ ೨ ಎಕರೆ, ಹಿಂದೆ ಸರ್ಕಾರ ಲೀಜ್ ಕೊಟ್ಟ ಜಾಗವನ್ನು ಖರೀದಿಸುವಾಗಿ ೪ ಎಕರೆ ಜಮೀನು ಕಡಿಮೆ ಮಾಡಿದ್ದು, ರಸ್ತೆ ನಿರ್ಮಾಣ, ನೀರಿನ ಟ್ಯಾಂಕ್ ಇತರೆ ಎಲ್ಲವೂ ಸೇರಿ ಒಟ್ಟು ೧೩ ಎಕರೆ ಜಮೀನು ಬಿವಿವಿ ಸಂಘ ಕಳೆದುಕೊಂಡಿದೆ. ಇದಕ್ಕೆ ಎರಡು ಪಟ್ಟಿಗಿಂತ ಕಡಿಮೆ ೨೦ ಎಕರೆ ಜಾಗವನ್ನು ನಾನು ಬಿಟಿಡಿಎ ಅಧ್ಯಕ್ಷ ಇದ್ದಾಗ ಮರ‍್ನಾಲ್ಕು ಬೋರ್ಡ್ ಸಭೆಗಳಲ್ಲಿ ಚರ್ಚೆಯಾಗಿ ಕೊನೆಗೆ ಹಂಚಿಕೆ ಆಗಿದೆ. ಇದಕ್ಕಾಗಿ ನಾವು ೭೬.೨೩ ಲಕ್ಷ ರೂ. ಡಿಡಿಯನ್ನು ಭರಣಾ ಮಾಡಿದ್ದೇವೆ. ಜಾಗ ಸಂಘದ ಹೆಸರಿನಲ್ಲಿ ನೋಂದಣಿಯೂ ಆಗಿದೆ. ಈಗ ಅದನ್ನು ರದ್ದು ಮಾಡಿರುವ ಹಿಂದೆ ಜಾತಿ ರಾಜಕಾರಣ ಇದೆ ಎಂದು ಆರೋಪಿಸಿದರು.ಅಂಜುಮನ್ ಸಂಸ್ಥೆ ಒಂದು ಎಕರೆ ಮುಳುಗಡೆಯಲ್ಲಿ ಕಳೆದುಕೊಂಡಿದ್ದಕ್ಕೆ ಅವರಿಗೆ ೧೫ ಎಕರೆ ಕೊಟ್ಟಿದ್ದಾರೆ. ಬಾಡಿಗೆ ಕಟ್ಟಡದಲ್ಲಿ ಇದ್ದ ಕಾಳಿದಾಸ ಶಿಕ್ಷಣ ಸಂಸ್ಥೆಗೆ ೧೨ ಎಕರೆ ಕೊಡಲಾಗಿದೆ. ನಾನು ಬಿಟಿಡಿಎ ಅಧ್ಯಕ್ಷ ಇದ್ದಾಗ ವಿದ್ಯಾಪ್ರಸಾರಕ ಸಂಸ್ಥೆ ಸರ್ಕಾರಿ ಜಾಗೆಯಲ್ಲಿ ಲೀಸ್ ಮೇಲೆ ಪಡೆದಿದ್ದರು. ಅದು ಮುಳುಗಡೆ ಆದಾಗ ಸಂಸ್ಥೆ ಯಾವುದೇ ಜಮೀನು ಕಳೆದುಕೊಂಡಿರಲಿಲ್ಲ. ಶಿಕ್ಷಣ ಸಂಸ್ಥೆ ಎಂದು ೮ ಎಕರೆ ಜಮೀನು ಕೊಟ್ಟಿದ್ದೇನೆ. ಆದರೆ, ಬಿವಿವಿ ಸಂಘಕ್ಕೆ ಎರಡು ಪಟ್ಟುಗಿಂತ ಕಡಿಮೆ ಕೊಟ್ಟರೆ ಅದು ಕಾನೂನುಬಾಹಿರ ಎಂದು ರದ್ದು ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಿವಿವಿ ಸಂಘ ೧೨೦ ೧೨೦ ವರ್ಷದ ಸಂಸ್ಥೆ. ಲಕ್ಷಾಂತರ ಜನರು ವಿದ್ಯ ಕಲಿಯುತ್ತಾರೆ. ಸಾವಿರಾರು ಜನರಿಗೆ ಅನ್ನಹಾಕುತ್ತಿದೆ. ಈ ಸಂಸ್ಥೆಗೆ ಜಾಗೆ ಕೊಟ್ಟರೆ ಜಾತಿ ಟಾರ್ಗೆಟ್ ಮಾಡಿ ಬಗ್ಗೆ ದ್ವೇಷ ಮಾಡುತ್ತಾರೆ ಎಂದು ವಿರೋಽಗಳನ್ನು ತಿವಿದರು.
ಸಮಗ್ರ ತನಿಖೆಗೆ ಒತ್ತಾಯ :
ನಿವೇಶನ ಹಂಚಿಕೆ ಯಾರ ಕಾಲದಲ್ಲಿ ಏನೇನಾಗಿದೆ ಎಂದು ತಿಳಿಯಲು ಬಿಟಿಡಿಎ ಹುಟ್ಟಿದಾಗಿನಿಂದ ಈ ವರೆಗಿನ ಎಲ್ಲ ನಿವೇಶನ, ಜಮೀನು ಹಂಚಿಕೆ ಬಗ್ಗೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಗ್ರ ತನಿಖೆ ಆಗಲಿ. ಯಾರಿಗೆಲ್ಲ ಕಾನೂನುಬಾಹಿರವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆಂದು ಗೊತ್ತಾಗಲಿ, ಇದು ಒಂದು ಸಲ ಆಗಿಬಿಡಲಿ ಎಂದು ಸರ್ಕಾರಕ್ಕೆ ನೇರ ಸವಾಲ್ ಹಾಕಿದರು.

ಸಚಿವರಿಗೆ ಮಾಹಿತಿ ಕೊರತೆ:
ಬಿವಿವಿ ಸಂಘಕ್ಕೆ ಹಂಚಿಕೆ ಆಗಿದ್ದ ಜಾಗೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ದೂರು ಕೊಟ್ಟಿದ್ದಾರೆ. ಪ್ರಾದೇಶಿಕ ಆಯುಕ್ತರಿಂದ ತನಿಖೆ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ತನಿಖೆ ವೇಳೆ ನಮಗೆ ನೋಟಿಸ್ ಕೊಟ್ಟಿಲ್ಲ, ನಮ್ಮ ಅಹವಾಲು ಆಲಿಸಿಲ್ಲ. ಈ ಕ್ಷಣದ ವರೆಗೂ ರದ್ದು ಮಾಡಿರುವ ಆದೇಶವೇ ಬಂದಿಲ್ಲ. ಮಾಧ್ಯಮಗಳಲ್ಲಿ ನೋಡಿದ್ದೇವೆ ಅಷ್ಟೆ. ಇಲ್ಲಿ ಸಚಿವರಿಗೆ ಮಾಹಿತಿ ಕೊರತೆ ಇದೆ. ಹಾಗೆಯೇ ಬಾಗಲಕೋಟೆ ಶಾಸಕರು ತಪ್ಪು ಮಾಹಿತಿ ನೀಡಿರಬಹುದು ಎಂದರು.

ಹೈಕೋರ್ಟ್ನಲ್ಲಿ ಕಾನೂನು ಹೋರಾಟ :
ಬಿವಿವಿ ಸಂಘಕ್ಕೆ ಸೆಕ್ಟರ್ ನಂಬರ್ ೫೯ರ ೨೦ ಎಕರೆ ಜಾಗೆ ನೀಡಿದ್ದು ಕಾನೂನುಬಾಹಿರವಲ್ಲ. ನಮ್ಮ ಸಂಸ್ಥೆ ಕಳೆದುಕೊಂಡು ಆಸ್ತಿಗೆ ಎರಡುಪಟ್ಟಿಗಿಂತಲೂ ಕಡಿಮೆ ಪಡೆದಿದ್ದೇವೆ. ಈಗ ಸರ್ಕಾರ ರದ್ದು ಮಾಡಿದ್ದರ ವಿರುದ್ಧ ನಾವು ಹೈಕೋರ್ಟ್ ನಲ್ಲಿ ಮೊರೆ ಹೋಗುತ್ತೇವೆ. ಕಾನೂನು ಹೋರಾಟ ನಡೆಸುತ್ತೇವೆ. ಬಟಿಡಿಎಯಿಂದ ಯಾವ ಯಾವ ಸಂಸ್ಥೆಗಳು ಎಷ್ಟೆಷ್ಟು ಆಸ್ತಿಯನ್ನು ಮುಳುಗಡೆಯಲ್ಲಿ ಕಳೆದುಕೊಂಡಿವೆ, ಅದಕ್ಕೆ ಪ್ರತಿಯಾಗಿ ಎಷ್ಟು ಜಾಗವನ್ನು ಪಡೆದುಕೊಂಡಿವೆ. ನಮ್ಮ ಬಿವಿವಿ ಸಂಘ ಕಳೆದುಕೊಂಡಿದ್ದೆಷ್ಟು? ಪಡೆದುಕೊಂಡಿದ್ದೆಷ್ಟು? ಇದೆಲ್ಲವನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ನಮಗೆ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಬಿಟಿಡಿಎ ಮಾಜಿ ಸದಸ್ಯ ಶಿವಾನಂದ ಟವಳಿ ಇದ್ದರು.