ಜಿಲ್ಲೆ

ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಕೊಡಿ

ಬೀದರ್: ಸಿಖ್, ಜೈನ, ಬೌದ್ಧ, ಇಸ್ಲಾಂ ಧರ್ಮಗಳಂತೆ ಲಿಂಗಾಯತಕ್ಕೂ ಸ್ವತಂತ್ರ ಧರ್ಮಕ್ಕೆ ಅಗತ್ಯ ಎಲ್ಲ ಅರ್ಹತೆ ಇವೆ. ಕೇಂದ್ರ ಸರ್ಕಾರ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕು ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲೂಕಿನ ಬಗದಲ್ ಗ್ರಾಮದಲ್ಲಿ ಬಸವಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಲಿಂಗಾಯತ ಧರ್ಮದ ಮಾನ್ಯತೆ ನೀಡಿದರೆ ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಗೌರವಿಸಿದಂತಾಗುತ್ತದೆ. ಕನ್ನಡಿಗರು ಸ್ಥಾಪಿಸಿದ ಏಕೈಕ ಧರ್ಮ ಲಿಂಗಾಯತ. ಬಸವಣ್ಣನವರು ಸಂಶೋಸಿದ ಇಷ್ಠಲಿಂಗ ಸಮಾನತೆಯ ಕುರುಹಾಗಿ ಎಲ್ಲ ಜಾತಿ, ಮತ, ಪಂಥದವರನ್ನು ಬೆಸೆಯಲು ಕಾರಣವಾಗಿದೆ. ಗುರುವಿನಿಂದ ದೀಕ್ಷೆ ಪಡೆದ ಇಷ್ಠಲಿಂಗ ಧರಿಸಿದ ಎಲ್ಲರೂ ಲಿಂಗಾಯತರು ಎಂದರು.
ಬಸವಣ್ಣನವರು ವೈಚಾರಿಕ, ವೈಜ್ಞಾನಿಕ ಧರ್ಮ ಕೊಟ್ಟಿದ್ದಾರೆ. ಬಸವಣ್ಣನವರ ಸದಾಶಯದಂತೆ ನಡೆದರೆ ನಾವು ಸಮೃದ್ಧ ಜೀವನ ಜತೆಗೆ ಕಲ್ಯಾಣ ರಾಜ್ಯ ಕಟ್ಟಬಹುದು. ಜಾತಿ, ವರ್ಗರಹಿತ ಮತ್ತು ಸಮಾನತೆ ತಳಹದಿ ಮೇಲೆ ಲಿಂಗಾಯತ ಧರ್ಮ ನಿರ್ಮಾಣವಾಗಿದೆ ಎಂದರು.
ಜಾಗತಿಕ ಲಿಂಗಾಯತ ಧರ್ಮ ಅಧ್ಯಕ್ಷ ಬಸವರಾಜ ಧನ್ನೂರು ಮಾತನಾಡಿ, ಬಸವಕಲ್ಯಾಣದಲ್ಲಿನ ಪರುಷಕಟ್ಟೆ ನವೀಕರಣ ನಡೆದಿದೆ. ಇದು ಅತ್ಯಂತ ಪವಿತ್ರವಾದ ತಾಣ. 12ನೇ ಶತಮಾನದಲ್ಲಿ ಬಸವಣ್ಣನವರು ನಿತ್ಯ ಅಹವಾಲು ಸ್ವೀಕರಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಸ್ಥಳ ಪರುಷಕಟ್ಟೆ. ಈ ಜಾಗದಲ್ಲಿ ಜಿಲ್ಲಾಡಳಿತ ಬಸವ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮೂರ್ತಿ ಅನಾವರಣಗೊಳಿಸಿದರು. ಬಸವ ಸೇವಾ ಪ್ರತಿಷ್ಠಾನದ ಅಕ್ಕ ಡಾ.ಗಂಗಾಂಬಿಕಾ ಪಾಟೀಲ್, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬು ವಾಲಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿದರು.
ಶ್ರೀ ಮಲ್ಲಿಕಾರ್ಜುನ ಸ್ವಾಮಿ ಬೆಳಗಾವಿ, ಮಾತೆ ಮೈತ್ರಾದೇವಿ, ಬಸವಗೀತ ಬೆಳಗಾವಿ ನೇತೃತ್ವ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಧರ್ಮಬಾಯಿ ಮಿಟ್ಟುಸಿಂಗ್ ರಾಠೋಡ್, ಬಸವ ಕೇಂದ್ರ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ರಮೇಶ ಮಠಪತಿ, ಬಸವರಾಜ ಐನುಲಿ, ಬಸವಣ್ಣಪ್ಪ ಐಸಪೂರೆ, ರಾಜಶೇಖರ ಪಾಟೀಲ್, ಸಂಜೀವಕುಮಾರ ಬಿರಾದಾರ್ ಇತರರಿದ್ದರು. ರಾಜಕುಮಾರ ಪಾಟೀಲ್ ಸ್ವಾಗತಿಸಿದರು. ವೈಜನಾಥ ಸಜ್ಜನಶೆಟ್ಟಿ ನಿರೂಪಣೆ ಮಾಡಿದರು. ಜಿ.ಬಂಡೆಪ್ಪ ವಂದಿಸಿದರು.