ಜಿಲ್ಲೆ

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಬಸವ ದಳ ಗುರಿ

ಬೀದರ್: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ರಾಷ್ಟ್ರೀಯ ಬಸವ ದಳದ ಗುರಿಯಾಗಿದೆ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ಯುವ ಘಟಕದ ಗ್ರಾಮ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ತತ್ವಗಳ ಪ್ರಚಾರ ವಿಶ್ವದಾದ್ಯಂತ ಆಗಬೇಕು. ಜಾಗತಿಕ ಧರ್ಮಗಳ ಪಟ್ಟಿಯಲ್ಲಿ ಲಿಂಗಾಯತವೂ ಸೇರಬೇಕು ಎನ್ನುವುದು ಜಗದ್ಗುರು ಮಾತೆ ಮಹಾದೇವಿ ಅವರ ಕೊನೆಯ ಆಸೆಯಾಗಿತ್ತು. ಹೀಗಾಗಿ ಸಂಘಟನೆ ಸ್ವತಂತ್ರ ಧರ್ಮ ಮಾನ್ಯತೆ ಪಡೆಯುವವರೆಗೂ ವಿರಮಿಸುವುದಿಲ್ಲ ಎಂದು ಘೋಷಿಸಿದರು.
ಬಸವ ದಳ ಲಿಂಗಾಯತರು ಹಾಗೂ ಬಸವ ತತ್ವ ನಿಷ್ಠರ ಅತಿ ದೊಡ್ಡ ಸಂಘಟನೆಯಾಗಿದೆ. ದೇಶದಾದ್ಯಂತ 1,200 ಶಾಖೆಗಳನ್ನು ಹೊಂದಿದೆ. ಬಸವ ತತ್ವದ ಪ್ರಚಾರ ಹಾಗೂ ಪ್ರಸಾರದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರು ಲಿಂಗಾಯತ ಧರ್ಮದ 900 ವರ್ಷಗಳ ಸುದೀರ್ಘ ಇತಿಹಾಸ, ಪರಂಪರೆ, ಧರ್ಮಗುರು, ಧರ್ಮ ಕ್ಷೇತ್ರ, ಧರ್ಮ ಸಾಹಿತ್ಯ ಮೊದಲಾದವುಗಳ ಅರಿವು ಮೂಡಿಸಿದ್ದರು. ಧರ್ಮ ಸಂರಕ್ಷಣೆಗಾಗಿ ರಾಷ್ಟ್ರೀಯ ಬಸವ ದಳವನ್ನು ಹುಟ್ಟು ಹಾಕಿದ್ದರು. ಯುವ ಘಟಕದ ಪದಾಧಿಕಾರಿಗಳು ಸಮಾಜ ಹಾಗೂ ದೇಶ ಕಟ್ಟುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮದ ಬಸವ ಮಂಟಪಕ್ಕೆ ಶಾಸಕರ ನಿಧಿಯಿಂದ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾಜ ವಹಿಸುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧ ಎಂದರು.
ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ ಷಟ್‍ಸ್ಥಲ ಧ್ವಜಾರೋಹಣ ಮಾಡಿ ಮಾತನಾಡಿದರು. ಕೊಳಾರ(ಕೆ) ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಪ್ರಶಾಂತ ಶರಗಾರ ಹಾಗೂ ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಶಂಭು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಎಂಜಿನಿಯರ್ ಹಾವಶೆಟ್ಟಿ ಪಾಟೀಲ, ಪ್ರಮುಖರಾದ ಅಮೃತಪ್ಪ ಶಂಭು, ಮಲ್ಲಿಕಾರ್ಜುನ ಶಂಭು, ಬಸವರಾಜ ಖ್ಯಾಮಾ, ಝರಣು ಕಾವಳೆ, ರಾಜೇಂದ್ರ ಜೊನ್ನಿಕೇರಿ, ಪಿಡಿಒ ಕುಮುದಾ ಉಪಸ್ಥಿತರಿದ್ದರು. ರಾಷ್ಟ್ರೀಯ ಬಸವ ದಳದ ಗ್ರಾಮ ಘಟಕದ ಅಧ್ಯಕ್ಷ ಅಶೋಕ ಶಂಭು ಅಧ್ಯಕ್ಷತೆ ವಹಿಸಿದ್ದರು.
ಬಸವ ದಳದ ಯುವ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು.
ಮುಖಂಡ ರವಿ ಶಂಭು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ ಸ್ವಾಮಿ ನಿರೂಪಿಸಿದರು. ರವಿ ಪಾಪಡೆ ಸ್ವಾಗತಿಸಿದರು. ಗುರು ಹುಡಗೆ ವಂದಿಸಿದರು.