ಜಿಲ್ಲೆ

ಲಿಂಗಾಯತ ಸೇವಾ ದಳ ಉದ್ಘಾಟನೆ

Bidar

ಬೀದರ್: ಲಿಂಗಾಯತ ಮಹಾಮಠದ ಅಂಗ ಸಂಸ್ಥೆ ಲಿಂಗಾಯತ ಸೇವಾ ದಳವನ್ನು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ಇಲ್ಲಿಯ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಉದ್ಘಾಟಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ 75 ಜನರ ರಕ್ತದಾನದೊಂದಿಗೆ ಶುರು ಮಾಡಲಾದ ಲಿಂಗಾಯತ ಸೇವಾ ದಳವನ್ನು ಇದೀಗ ವಿಧ್ಯುಕ್ತವಾಗಿ ಉದ್ಘಾಟಿಸಲಾಗಿದೆ ಎಂದು ಅಕ್ಕ ಅವರು ಹೇಳಿದರು.

ಸೇವಾ ದಳದ ಸದಸ್ಯರು ಬಸವಣ್ಣನವರ ಕಾಯಕ- ದಾಸೋಹ ತತ್ವ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿಶ್ವ ಭ್ರಾತೃತ್ವಕ್ಕೆ ಪ್ರಯತ್ನಿಸಬೇಕು. ದೇಶದ, ಧರ್ಮದ ಸೇವೆಗೆ ಕಂಕಣಬದ್ಧರಾಗಿರಬೇಕು. ಜಾತಿ, ವರ್ಗ, ವರ್ಣ, ಲಿಂಗ ಭೇದಗಳಿಲ್ಲದ ಸರ್ವ ಸಮಾನತೆಯ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಜಿಲ್ಲೆಯ 75 ಗ್ರಾಮಗಳಲ್ಲಿ ಲಿಂಗಾಯತ ಮಹಾ ಮಠದಿಂದ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಇನ್ನು ಬಸವ ತತ್ವ ಚಿಂತನ ಮಾಲಿಕೆಯಲ್ಲಿ ಕಲ್ಯಾಣ ಕರ್ನಾಟಕದಾದ್ಯಂತ 770 ಉಪನ್ಯಾಸ ಹಾಗೂ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.

ಸಮಾರಂಭದ ನೇತೃತ್ವ ವಹಿಸಿದ್ದ ಪ್ರಭುದೇವರು ಮಾತನಾಡಿ, ಸದೃಢ ಸಮಾಜ ನಿರ್ಮಾಣದ ಗುರಿ ಇಟ್ಟುಕೊಂಡು ಲಿಂಗಾಯತ ಸೇವಾ ದಳ ಕಟ್ಟಲಾಗಿದೆ ಎಂದು ನುಡಿದರು.
ಲಿಂಗಾಯತ ಸೇವಾ ದಳದ ಅಧ್ಯಕ್ಷ ಅಭಿಷೇಕ ಮಠಪತಿ ಮಾತನಾಡಿ, ಅಕ್ಕನವರ ಮಾರ್ಗದರ್ಶನದಲ್ಲಿ ಲಿಂಗಾಯತ ಮಹಾಮಠದ ಆದೇಶದಂತೆ ಶ್ರದ್ಧೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿ, ಪ್ರಮಾಣ ವಚನ ಸ್ವೀಕರಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕುಮಾರ ಕರಂಜಿ, ಬಸವ ಸೇವಾ ಪ್ರತಿಷ್ಠಾನದ ಆಡಳಿತಾಧಿಕಾರಿ ಅಶೋಕ ಎಲಿ, ಪ್ರಮುಖರಾದ ಜೈರಾಜ ಖಂಡ್ರೆ, ಅಣವೀರ ಕೊಡಂಬಲ್, ರಾಜಕುಮಾರ ಪಾಟೀಲ, ವಿರೂಪಾಕ್ಷ ಗಾದಗಿ, ರಾಜು ಕೋಟೆ ಮೊದಲಾದವರು ಉಪಸ್ಥಿತರಿದ್ದರು. ಅಶ್ವಿನಿ ರಾಜಕುಮಾರ ಸುಮಧುರವಾಗಿ ವಚನ ಗಾಯನ ಪ್ರಸ್ತುತಪಡಿಸಿದರು. ರಮೇಶ ಮಠಪತಿ ನಿರೂಪಿಸಿದರು. ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು. ಹಾವಯ್ಯ ಸ್ವಾಮಿ ವಂದಿಸಿದರು.

ಸೇವಾ ದಳ ಪದಾಧಿಕಾರಿಗಳು

ಅಭಿಷೇಕ ಮಠಪತಿ (ಅಧ್ಯಕ್ಷ), ಸಂಗಮೇಶ ಪಾಟೀಲ, ಪ್ರದೀಪ್ ಬಿರಾದಾರ, ನಿಲೇಶ್ ಪನಸಾಲೆ, ಸತ್ಯನಾರಾಯಣ ಪಾಟೀಲ (ಉಪಾಧ್ಯಕ್ಷರು), ಓಂಪ್ರಕಾಶ ಕೌಟೆ (ಪ್ರಧಾನ ಕಾರ್ಯದರ್ಶಿ), ಪ್ರವೀಣ ಬಿರಾದಾರ, ಓಂಕಾರ ಬಿರಾದಾರ, ಶಾಂತಲಿಂಗಯ್ಯ ಮಠಪತಿ, ಲಿಂಗಾನಂದ ಹಂಗರಗಿ (ಸಂಘಟನಾ ಕಾರ್ಯದರ್ಶಿಗಳು), ಶಿವಕುಮಾರ ವಡ್ಡಿ, ಆತ್ಮಾನಂದ ಧನಶ್ರೀ (ಸಹ ಕಾರ್ಯದರ್ಶಿ), ಪ್ರದೀಪ್ ಜ್ಯಾಂತೆ (ಕೋಶಾಧ್ಯಕ್ಷ), ಸಿದ್ದೇಶ ಪಾಟೀಲ, ಸಂಗಮೇಶ ಪಾಟೀಲ, ಆದಿತ್ಯ ಚಿಮಕೋಡೆ, ಬಸವಕಿರಣ ಸ್ವಾಮಿ, ಬಸವರಾಜ ಮೋಳಕೇರಿ, ಮುಕುಂದ, ಶಿವಕುಮಾರ ಹಂಗರಗಿ, ಆನಂದ ವಡ್ಡನಕೇರಿ, ಸುರೇಶ ಪುಣ್ಯಶೆಟ್ಟಿ, ಸಚ್ಚಿದಾನಂದ, ಸಂಪ್ರೀತ್ ಪತಂಗೆ, ವೀರೇಶ ಸ್ವಾಮಿ (ಸದಸ್ಯರು).