ಯಾದಗಿರಿ: ಬಸವ ಪ್ರಣೀತ ಲಿಂಗಾಯತ ಧರ್ಮ ಜಗತ್ತಿನ ಎಲ್ಲ ಧರ್ಮಗಳಿಗಿಂತ ತುಂಬಾ ವಿಭಿನ್ನವಾದ, ವೈಶಿಷ್ಟ್ಯಪೂರ್ಣವಾಗಿದೆ ಎಂದು ಚಿಂತಕ ಪ್ರೋ.ಆರ್.ಕೆ. ಹುಡುಗಿ ತಿಳಿಸಿದರು.
ಶಹಾಪುರದಲ್ಲಿ ಬುಧವಾರ ಸಂಜೆ ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಬಸವಮಾರ್ಗ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು -108 ಸಭೆಗೆ ಚಾಲನೆ ನೀಡಿ ಮಾತನಡಿ, 12ನೇ ಶತಮಾನದಲ್ಲಿ ತಳವರ್ಗದ ಜನ ಸಮೂಹಕ್ಕೆ ಶಿಕ್ಷಣ ಕಲಿಸಿ, ಅವರೆಲ್ಲರನ್ನು ಜ್ಞಾನವಂತರನ್ನಾಗಿ ಮಾಡಿದ್ದು, ಪಟ್ಟಭದ್ರರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿತು. ಆದ್ದರಿಂದಲೆ ಅವರು ಶರಣರನ್ನು ಅಕ್ಷರಶಃ ಕಗ್ಗೊಲೆ ಮಾಡಿದರು. ವಚನ ಸಾಹಿತ್ಯ ಮುಂದೆಯೂ ಉಳಿದರೆ ತಮ್ಮ ಬಂಡವಾಳ ಬಯಲಾಗುತ್ತದೆ ಎಂದರಿತು ರಾಶಿ,ರಾಶಿ ವಚನಗಳ ಕಟ್ಟುಗಳನ್ನು ಸುಟ್ಟು ಹಾಕಿದರು ಎಂದರು.
ಪ್ರಶ್ನೆ ಮಾಡುವುದು, ಒಳ ಹೊಕ್ಕು ನೋಡುವುದು, ತರ್ಕ ಬದ್ಧವಾಗಿ ವಿಚಾರ ಮಾಡುವ ಕ್ರಮವನ್ನು ಜನ ಸಾಮಾನ್ಯರಿಗೆ ತಿಳಿಸಿ ಅವರ ಮೂಲಕವೇ ವೇದ,ಆಗಮಶಾಸ್ತ್ರ, ಪುರಾಣಗಳ ಕುರಿತು ಮಾತನಾಡಲು ಹಚ್ಚಿದರು. ಆಗ ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ. ತರ್ಕದ ಬೆನ್ನ ಬಾರನೆತ್ತುವೆ. ಆಗಮದ ಮೂಗಕೊಯ್ಯುವೆ ಎನ್ನುತ್ತ ಆ ಚಳುವಳಿ ಪ್ರಶ್ನೆ ಮಾಡಲು ಆರಂಭಿಸಿತು ಎಂದು ಹೇಳಿದರು.