ಚಿತ್ರದುರ್ಗ: ಲಿಂಗಾಯತ ಎಂಬುದನ್ನು ಜಾತಿ ಸೂಚಕವಾಗಿ ಬಳಸಿದರೆ ಮಹಾ ಅಪರಾಧ. ಧರ್ಮ ಸೂಚಕವಾಗಿ ಬಳಸದಿದ್ದರೆ ಮಹಾ ದ್ರೋಹ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಜಯಬಸವಕುಮಾರ ಶ್ರೀ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದಿಂದ ಸೋಮವಾರ ನಡೆದ ಸೇವಾ ದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಇಡೀ ವಿಶ್ವದಲ್ಲಿ ಕಾಯಕ ಸಂಸ್ಕೃತಿ ಉಳ್ಳವರು, ಸತ್ಯ-ಸನ್ಮಾರ್ಗದಲ್ಲಿ ನಡೆಯುವ ಎಲ್ಲರೂ ಲಿಂಗಾಯತರು. 12ನೇ ಶತಮಾನದಲ್ಲೇ ಈ ಧರ್ಮ ಅಸ್ತಿತ್ವದಲ್ಲಿತ್ತು. ಈಗ ಜಾಗತಿಕವಾಗಿ ಸಾಂವಿಧಾನಿಕ ಮಾನ್ಯತೆ ಬಹಳ ಮುಖ್ಯವಾಗಿದ್ದು, ಎದೆಗಾರಿಕೆಯಿಂದ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ ಎಂದು ಬೇಸರಿಸಿದರು.
ಕರ್ನಾಟಕದಲ್ಲಿನ ಲಿಂಗಾಯತ ಚಳವಳಿಗಿಂತ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ನಮ್ಮಂತೆ ಇತರೆ ಧರ್ಮಗಳು ಶ್ರೇಷ್ಠ ಎಂಬ ಭಾವನೆ ಹೊಂದಬೇಕು ಎಂದರು.
ಸಮಾಜದ ಒಳಿತಿಗಾಗಿ ಅನೇಕ ಮಠಾಧೀಶರು ಶ್ರಮಿಸುತ್ತಿದ್ದಾರೆ. ಆದರೆ, ತಮ್ಮ ಶಿಷ್ಯರಿಗೆ ಬಾರ್ ಲೈಸನ್ಸ್ ನೀಡುವಂತೆ ರಾಜಕಾರಣಿಗಳ ಮೇಲೆ ಒತ್ತಡ ಏರುವ ಗುರುಗಳೂ ಇದ್ದಾರೆ ಎಂದು ಬೇಸರಿಸಿದರು.