ಮೈಸೂರು: ಕಲುಷಿತ ನೀರು ಸೇರ್ಪಡೆಯಿಂದ ನಗರದ ಲಿಂಗಾಂಬುಧಿ ಕೆರೆಯಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿವೆ.
ರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಪ್ರತಿಷ್ಠಿತ ಕೆರೆಗೆ ಯಾವುದೇ ಅಡೆತಡೆ ಇಲ್ಲದೆ ಚರಂಡಿ ನೀರನ್ನು ನೇರವಾಗಿ ಬಿಡುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಮೀನುಗಳ ಜೀವಹಾನಿಯಾಗಿದೆ. ಕೊಳಚೆ ನೀರು ಸೇರ್ಪಡೆಯಿಂದ ಇಡೀ ಕೆರೆ ಮಲಿನಗೊಂಡಿದ್ದು, ದುರ್ವಾಸನೆ ಬೀರುತ್ತಿದೆ. ನಿತ್ಯ ನೂರಾರು ಜನರು ಕೆರೆ ದಂಡೆಯಲ್ಲಿ ವಾಯುವಿಹಾರ ಮಾಡುತ್ತಿದ್ದು, ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಡಿಸಿಎಫ್ ಡಾ.ಕೆ.ಎನ್.ಬಸವರಾಜ, ಎಸಿಎಫ್ ಎಸ್.ಲಕ್ಷ್ಮೀಕಾಂತ್, ಆರ್‌ಎಫ್‌ಒ ಸುರೇಂದ್ರ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕೆರೆ ಬಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆರೆ ನೀರಿನ ಮಾದರಿ ಸಂಗ್ರಹಿಸಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳಿಸಿದ್ದಾರೆ. ಜತೆಗೆ, ಸತ್ತ ಕೆಲವು ಮೀನುಗಳನ್ನು ಮಂಗಳೂರಿನ ಮೀನುಗಾರಿಕೆ ಕಾಲೇಜಿಗೆ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿ ಬಂದ ಬಳಿಕ ಮೀನುಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಸತ್ತ ಮೀನುಗಳನ್ನು ಕೆರೆಯಿಂದ ಹೊರತೆಗಿಸಿ ಹೂಳಲಾಗಿದೆ.
ಕೆರೆಯಲ್ಲಿ ಕಲುಷಿತ ನೀರು ಸೇರ್ಪಡೆ ಹಾಗೂ ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ಮೀನುಗಳು ಸತ್ತು ತೇಲುತ್ತಿರಬಹುದು. ಮೀನುಗಾರಿಕೆ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಆ. 27ರಂದು ಮೈಸೂರು ವ್ಯಾಪ್ತಿಯ ಬೆಳವಾಡಿ, ವಿಜಯನಗರ, ದಟ್ಟಗಳ್ಳಿ ಹಾಗೂ ಬೋಗಾದಿ ಪ್ರದೇಶಗಳಲ್ಲಿ ಮಳೆಯಾಗಿದ್ದು, ಅಲ್ಲಿಂದ ರಾಜಕಾಲುವೆಗಳ ಮೂಲಕ ನೀರು ಹರಿದು ಬಂದಿದೆ. ಕೆರೆ ನೀರಿನ ಉಷ್ಣತೆ ಹಾಗೂ ಆಮ್ಲಜನಕದಲ್ಲಿ ವ್ಯತ್ಯಾಸವಾಗಿದೆ. ಇದರಿಂದ ಬಹುತೇಕ ದೊಡ್ಡ ಮೀನುಗಳು ಮೃತಪಟ್ಟಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಡಿಸಿಎಫ್ ಡಾ.ಕೆ.ಎನ್.ಬಸವರಾಜು ಮಾಹಿತಿ ನೀಡಿದ್ದಾರೆ.
ತ್ಯಾಜ್ಯ ಆವರಿಸಿರುವ ಕೆರೆ
ನಗರದ ಪಕ್ಷಿ ತಾಣವಾಗಿರುವ ಲಿಂಗಾಂಬುಧಿ ಕೆರೆ ಪ್ಲಾಸ್ಟಿಕ್ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯದಿಂದ ಆವರಿಸಿದೆ. ದಂಡೆಯ ಮೇಲೆ ಕಟ್ಟಡದ ತ್ಯಾಜ್ಯ ಸುರಿದರೆ, ಚರಂಡಿಗಳ ಮೂಲಕ ಮಲಿನ ನೀರು ಕೆರೆಗೆ ಸೇರಿಸುತ್ತಿದೆ. ಇಡೀ ಕೆರೆ ಪಾಚಿ ಆವರಿಸಿ ಹಸಿರು ಮಯವಾಗಿದೆ. ಪ್ಲಾಸ್ಟಿಕ್ ಬಾಟಲಿಗಳು, ಚಪ್ಪಲಿಗಳು ಸೇರಿದಂತೆ ಪ್ಲಾಸ್ಟಿಕ್‌ಗಳು ಕೆರೆಯ ತುಂಬ ತೇಲುತ್ತಿವೆ.
ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ನಿರ್ವಹಣೆಯಲ್ಲಿರುವ ಕೆರೆಯ ಆವರಣವನ್ನು ಅಭಿವೃದ್ಧಿಪಡಿಸಿರುವುದರಿಂದ ಮುಂಜಾನೆ ಮತ್ತು ಮುಸ್ಸಂಜೆ ವಾಯುವಿಹಾರಗಳು ನಿತ್ಯ ಬರುತ್ತಾರೆ. ಈಗ ಕೆರೆ ಕಲುಷಿತಗೊಂಡಿರುವುದರಿಂದ ಜನರು ಶಪಿಸುವಂತಾಗಿದೆ.
ಪ್ರೀತಿ ಬಡಾವಣೆ ಕಡೆಯ ಗೇಟ್‌ನಿಂದ ಬರುವ ವಾಯುವಿಹಾರಿಗಳು ಕಾಲಭೈರವ ದೇವಸ್ಥಾನ ಬಳಸಿ ಮುಂದೆ ಸಾಗುವಾಗ ಮೂಗು ಮಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಶ್ರೀರಾಂಪುರ ಭಾಗದಿಂದ ಬರುವ ಕೊಳಚೆ ನೀರು ಕೆರೆಯಲ್ಲಿ ಪಾಚಿ, ಕಳೆ ಸಸ್ಯಗಳ ಬೆಳವಣಿಗೆಗೆ ಕಾರಣವಾಗಿದೆ.
ಕೌಟಿಲ್ಯ ಶಾಲೆ ಬಳಿ ಕೆರೆಗೆ ಸೇರುತ್ತಿರುವ ಕೊಳಚೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ತಡೆಯುವ ಪ್ರಯತ್ನವಾಗುತ್ತಿಲ್ಲ. ಮಳೆಗಾಲದಲ್ಲಿ ಕೆರೆಗೆ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ತುಂಬುತ್ತಿದೆ. ಅಷ್ಟೇ ಅಲ್ಲದೆ, ಕೆರೆಯ ಅರಣ್ಯ ವಿಹಾರ ಮಾರ್ಗವನ್ನೇ ತುಂಡರಿಸಿದ್ದು, ವಾಯುವಿಹಾರಿಗಳ ಓಡಾಟಕ್ಕೂ ತಡೆಯಾಗಿದೆ.
ಮಳೆ ನೀರು ಬರಬೇಕಾದ ಚರಂಡಿಗಳನ್ನು ಕೆಲವು ಕಡೆ ಒತ್ತುವರಿ ಮಾಡಿಕೊಂಡಿರುವುದಲ್ಲದೆ, ಮನೆಯ ಚರಂಡಿ ನೀರನ್ನು ಮಳೆ ನೀರು ಚರಂಡಿಗೆ ಬಿಡಲಾಗುತ್ತಿದೆ. ಆದ್ದರಿಂದ, ಕಾಲುವೆ ಒತ್ತುವರಿ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಕೊಳಚೆ ನೀರು ಚರಂಡಿಗೆ ಸೇರದಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮಲಿನ ನೀರನ್ನು ಶುದ್ಧೀಕರಿಸಿ ಬಳಿಕ ಕೆರೆಗೆ ಬಿಡಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.