ಮೈಸೂರು: ನಿರ್ವಹಣೆ ಕಾರಣಕ್ಕೆ ಲಿಂಗಾಂಬುಧಿ ಕೆರೆಗೆ ಪ್ರವೇಶ ಶುಲ್ಕ ವಿಧಿಸಲು ಹೊರಟಿರುವ ಅರಣ್ಯ ಇಲಾಖೆ ಪ್ರಸ್ತಾವನೆಯನ್ನು ವಿರೋಧಿಸಿ ಲಿಂಗಾಂಬುಧಿ ಉದ್ಯಾನ ವಾಯುವಿಹಾರಿಗಳ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಉದ್ಯಾನದ ಪ್ರವಾಸ ದ್ವಾರದ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದು ಮೈಸೂರಿನ ಅತ್ಯಂತ ದೊಡ್ಡ ಹಾಗೂ ಹಳೆಯ ಐತಿಹಾಸಿಕ ಕೆರೆ. ಇದರ ಬಹುಭಾಗ ನೀರಿನಿಂದ ಆವೃತವಾಗಿದೆ. ಉಳಿದ ಪ್ರದೇಶವನ್ನು ಮೀಸಲು ಅರಣ್ಯವೆಂದು ಘೋಷಿಸಲಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಸಾಮಾನ್ಯರ ತೆರಿಗೆಯಿಂದ ಅನೇಕ ಸಾರ್ವಜನಿಕ ಸೇವೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಈ ಕೆರೆಯೂ ಜನಗಳ ಆಸ್ತಿ ಹಾಗೂ ಅದರ ನಿರ್ವಹಣೆ ಸರ್ಕಾರದ ಜವಾಬ್ದಾರಿ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
ಇತ್ತೀಚೆಗೆ ಸರ್ಕಾರದ ನಿರ್ದೇಶನದಂತೆ ಲಿಂಗಾಂಬುಧಿ ವೃಕ್ಷೋದ್ಯಾನ ನಿರ್ವಹಣೆ ಮಾಡಲೆಂದು ಪ್ರವೇಶ ಶುಲ್ಕ ವಿಧಿಸಲು ಅರಣ್ಯ ಇಲಾಖೆ ಮುಂದಾಗಿರುವುದು ಖಂಡನೀಯ. ಕರೊನಾ ಕಾರಣದಿಂದ ಬಹುಕಾಲ ಮುಚ್ಚಿದ್ದ ಈ ಉದ್ಯಾನ ಮತ್ತೆ ಸಾರ್ವಜನಿಕರಿಗೆ ತೆರೆ ದಿದೆ. ನೂರಾರು ಜನ ಹಿರಿಯರು, ಮಕ್ಕಳು, ಜನಸಾಮಾನ್ಯರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ವಾಯುವಿಹಾರಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಆದರೀಗ ಶುಲ್ಕದ ಹೆಸರಿನಲ್ಲಿ ತಡೆ ಉಂಟು ಮಾಡುತ್ತಿರುವುದು ಜನರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಇರುವಂತಹ ಕಾಳಜಿ ಎಂತಹದು ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಪ್ರವೇಶ ಶುಲ್ಕ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಮನವಿ ಸ್ವೀಕರಿಸಿ ಮಾತನಾಡಿದ ಅರಣ್ಯ ಇಲಾಖೆಯ ಎಸಿಎಫ್ ಲಕ್ಷ್ಮೀ ಕಾಂತ್ ಅವರು, ಪ್ರವೇಶ ಶುಲ್ಕ ವಿಧಿಸುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ನಿತ್ಯ ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ವಿಧಿಸುವುದಿಲ್ಲ ಎಂದು ತಿಳಿಸಿದರು.
ಸಮಿತಿಯ ಸದಸ್ಯರಾದ ನಾಗೇಶ್, ಸಿದ್ದೇಶ್, ಸಂಧ್ಯಾ, ಟಿ.ಆರ್.ಸುನೀಲ್, ಅವಿನಾಶ್ ಹಾಗೂ ಕಿನಿ, ಲಕ್ಕಿಮಾರ್, ನರಕೇಸರಿ, ಶಿವಕುಮಾರ್ ಬಸವಣ್ಣ, ಲೋಕೇಶ್, ಸುಮತಿ, ಜನಾದರ್ನ್, ಬಸವೇಶ್ವರ ಸೇವಾ ಸಮಿತಿ, ಸುರಭಿ ಮಹಿಳಾ ಸಂಘ, ನಾಗರಿಕ ಸಮಿತಿಗಳ ಸಮನ್ವಯ ವೇದಿಕೆ, ರಾಮಕೃಷ್ಣನಗರದ ಹಿರಿಯ ನಾಗರಿಕರು ಇದ್ದರು.